ADVERTISEMENT

ವಿಮಾನ ಪ್ರಯಾಣಕ್ಕೆ ದುಂದುವೆಚ್ಚ : ಯಡಿಯೂರಪ್ಪ–ಸಿ.ಎಂ ಜಟಾಪಟಿ

​ಪ್ರಜಾವಾಣಿ ವಾರ್ತೆ
Published 7 ಜೂನ್ 2018, 19:30 IST
Last Updated 7 ಜೂನ್ 2018, 19:30 IST

ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ವಿಮಾನ ಪ್ರಯಾಣ ವಿಷಯವು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಬಿಎಸ್‌ವೈ ನಡುವೆ ಜಟಾಪಟಿಗೆ ಕಾರಣವಾಗಿದೆ.

‘ಯಡಿಯೂರಪ್ಪ ಅವರು ಇಳಕಲ್‌ಗೆ ಹೆಲಿಕಾಪ್ಟರ್‌ನಲ್ಲಿ ಪ್ರಯಾಣ ಮಾಡಿದ್ದಕ್ಕೆ ಸಂಬಂಧಿಸಿದಂತೆ ₹ 13 ಲಕ್ಷ ಬಿಲ್‌ನ ಕಡತ ನನ್ನ ಬಳಿ ಬಂದಿತ್ತು. ಇಂತಹ ದುಂದುವೆಚ್ಚ ಅಗತ್ಯವೇ’ ಎಂಬ ಕುಮಾರಸ್ವಾಮಿ ಸೋಮವಾರ ಪ್ರಶ್ನಿಸಿದ್ದರು. ಇದಕ್ಕೆ ಗುರುವಾರ ಪತ್ರ ಬರೆದು ಪ್ರತಿಕ್ರಿಯೆ ನೀಡಿರುವ ಯಡಿಯೂರಪ್ಪ, ‘ನಾನು ಈಗಲೂ ಪ್ರವಾಸದ ವೆಚ್ಚ ಭರಿಸಲು ಸಿದ್ಧನಿದ್ದೇನೆ. ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತು, ಜನರನ್ನು ದಾರಿ ತಪ್ಪಿಸುವ ಅಸಂಬದ್ಧ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ಇಂತಹ ಕೀಳು ಮಟ್ಟದ ಹೇಳಿಕೆಗಳಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಿಸುವುದಿಲ್ಲ’ ಎಂದಿದ್ದಾರೆ.

‘ಸ್ವಾಮೀಜಿಗಳ ಬಗ್ಗೆ ನಿಮಗೆ ಗೌರವವಿಲ್ಲದೆ ಇರಬಹುದು. ಅಧಿಕಾರ ವಹಿಸಿಕೊಂಡ ತಕ್ಷಣ ಸಿರಿಗೆರೆ ಸ್ವಾಮೀಜಿಗಳಿಗೆ ಅಗೌರವ ತೋರುವ ಮಾತನಾಡಿದ್ದೀರಿ’ ಇದು ತರವಲ್ಲ ಎಂದಿದ್ದಾರೆ.
*
‘ದಾರಿದ್ರ್ಯ ಬಂದಿಲ್ಲ’ 
'ಯಡಿಯೂರಪ್ಪ ಅವರಿಂದ ಹೆಲಿಕಾಪ್ಟರ್‌ ಪ್ರಯಾಣದ ಹಣ ಕಟ್ಟಿಸಿಕೊಳ್ಳುವಷ್ಟು ದಾರಿದ್ರ್ಯ ನನ್ನ ಸರ್ಕಾರಕ್ಕೆ ಬಂದಿಲ್ಲ’ ಎಂದು ಕುಮಾರಸ್ವಾಮಿ ತಿರುಗೇಟು ನೀಡಿದರು.

ADVERTISEMENT

*
ರೈತರ ಸಾಲ ಮನ್ನಾ ಮಾಡಿ ನಿಮ್ಮ ರಾಜಕೀಯ ನೈಪುಣ್ಯ ಪ್ರದರ್ಶಿಸಿ.
–ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.