ADVERTISEMENT

ವಿಮ್ಸ ಮಕ್ಕಳ ವಾರ್ಡ್: ನರಕ ಸದೃಶ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2011, 19:30 IST
Last Updated 28 ಅಕ್ಟೋಬರ್ 2011, 19:30 IST

ಬಳ್ಳಾರಿ: ವಿವಿಧ ಕಾಯಿಲೆಗಳಿಂದ ನರಳುತ್ತಿರುವ ಅನೇಕ ಮಕ್ಕಳು ನಗರದ ವಿಮ್ಸ ಆಸ್ಪತ್ರೆಗೆ ದಾಖಲಾಗಿದ್ದು, ಆ ಮಕ್ಕಳನ್ನು ಮಲಗಿಸಲು ಸಾಕಷ್ಟು  ಹಾಸಿಗೆ ಸೌಲಭ್ಯವಿಲ್ಲದ ಕಾರಣ ಒಂದೇ ಹಾಸಿಗೆಯಲ್ಲಿ ಇಬ್ಬಿಬ್ಬರನ್ನು ಮಲಗಿಸಲಾಗುತ್ತಿದೆ.

ಮಕ್ಕಳ ತುರ್ತು ಚಿಕಿತ್ಸಾ ಘಟಕದಲ್ಲಿ ಶುಕ್ರವಾರ 40ಕ್ಕೂ ಹೆಚ್ಚು ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದು, ಕೆಲವರಲ್ಲಿ ಶಂಕಿತ ಮಿದುಳು ಜ್ವರ ಇರುವುದರಿಂದ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಮಕ್ಕಳೊಂದಿಗೆ ಬಂದಿರುವ ತಾಯಂದಿರು ಆಸ್ಪತ್ರೆಯಲ್ಲಿರಲು ಸೂಕ್ತ ವ್ಯವಸ್ಥೆ ಇಲ್ಲದ್ದರಿಂದ ಅವರೂ ಮಕ್ಕಳ ಹಾಸಿಗೆಯಲ್ಲೇ ಮಲಗುವಂತಾಗಿದೆ.

ಶಂಕಿತ ಮಿದುಳು ಜ್ವರದಿಂದ ಬಳಲುತ್ತಿದ್ದ 23 ಮಕ್ಕಳು 15 ದಿನಗಳ ಅವಧಿಯಲ್ಲಿ ವಿಮ್ಸಗೆ ದಾಖಲಾಗಿದ್ದು, ಅವರಲ್ಲಿ ಕೆಲವರು ಸ್ಥಳೀಯರಾಗಿದ್ದರೆ, ಕೆಲವರು ಪಕ್ಕದ ರಾಯಚೂರು ಜಿಲ್ಲೆಗೆ ಸೇರಿದರಾಗಿದ್ದಾರೆ. ಬಳ್ಳಾರಿಯ ಇಬ್ಬರು ಹಾಗೂ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಇಬ್ಬರು ಮಕ್ಕಳಲ್ಲಿ ಮಿದುಳು ಜ್ವರ, ಒಬ್ಬ ಮಗುವಿನಲ್ಲಿ ಡೆಂಗೆ ಇರುವುದು ದೃಢಪಟ್ಟಿದೆ. ಇದೀಗ ಅವರ ಆರೋಗ್ಯ ಸುಧಾರಿಸಿದ್ದು, ಇನ್ನೂ ಕೆಲವು ಮಕ್ಕಳು ಡೆಂಗೆ, ಮಲೇರಿಯಾ ಮತ್ತು ಮಿದುಳು ಜ್ವರದ ಲಕ್ಷಣಗಳಿಂದ ಬಳಲುತ್ತಿದ್ದಾರೆ. ಅವರನ್ನು ತುರ್ತು ಚಿಕಿತ್ಸಾ ಘಟಕದಲ್ಲಿ ಇರಿಸಲಾಗಿದೆ.

`ಹಾಸಿಗೆಗಳ ಕೊರತೆಯಿಂದಾಗಿ ಒಂದೇ ಹಾಸಿಗೆಯ ಮೇಲೆ ಎರಡು ಮೂರು ಮಕ್ಕಳನ್ನು ಮಲಗಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪಕ್ಕದ ಜಿಲ್ಲೆಗಳಿಂದಲೂ ಚಿಕಿತ್ಸೆಗೆಂದು ಬರುವ ಮಕ್ಕಳನ್ನು ಬೇರೆಡೆ ಕಳುಹಿಸದೆ ಇಲ್ಲೇ ಹಾಸಿಗೆ ಸೌಲಭ್ಯ ಕಲ್ಪಿಸಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ~ ಎಂದು ವಿಮ್ಸ ಆಸ್ಪತ್ರೆ ಅಧೀಕ್ಷಕ ಡಾ.ವಿದ್ಯಾಧರ ಕಿನ್ನಾಳ ತಿಳಿಸುತ್ತಾರೆ.

`ನವಜಾತ ಶಿಶುಗಳನ್ನು ಇರಿಸುವ ತುರ್ತು ಚಿಕಿತ್ಸಾ ಘಟಕ (ಎನ್‌ಐಸಿಯು )ದಲ್ಲೂ ಇದೇ ರೀತಿಯ ತೊಂದರೆ ಇದ್ದು, ಅಲ್ಲಿ ದಾಖಲಾಗುವ ಮಕ್ಕಳಿಗೆ ಅಗತ್ಯ `ಫೋಟೊ ಥೆರೆಪಿ~ ನೀಡಲು ಜಾಗದ ಕೊರತೆ ಇದೆ. ವಿಮ್ಸಗೆ ದಾಖಲಾಗುವವರ ಸಂಖ್ಯೆಯಲ್ಲಿ ಮಕ್ಕಳ ಪ್ರಮಾಣ ಅಧಿಕವಾಗಿದ್ದು, ಮಕ್ಕಳ ಹಾಗೂ ನವಜಾತ ಶಿಶುವಿನ ತುರ್ತು ಚಿಕಿತ್ಸಾ ಘಟಕವನ್ನು ವಿಸ್ತರಿಸುವ ಅಗತ್ಯವಿದೆ~ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ವಿಮ್ಸನ ವೈದ್ಯರು ತಿಳಿಸುತ್ತಾರೆ.

ಆರಂಭವಾಗದ ಆಸ್ಪತ್ರೆ: ಜರ್ಮನಿ ಅನುದಾನದಲ್ಲಿ ನಗರದಲ್ಲಿ ಏಳು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಜಿಲ್ಲಾ ಆಸ್ಪತ್ರೆ ಕಟ್ಟಡವನ್ನು ಆಗಸ್ಟ್ 12ರಂದೇ ಉದ್ಘಾಟಿಸಿದ್ದರೂ, ಸೇವೆ ರೋಗಿಗಳಿಗೆ ಲಭ್ಯವಾಗಿಲ್ಲ. ಈ ಆಸ್ಪತ್ರೆಗೆ ಬೇಕಾದಷ್ಟು ವೈದ್ಯರು, ಸಿಬ್ಬಂದಿ ನೇಮಕಾತಿಗೆ ಅನುಮತಿ ದೊರೆಯದೇ ಇರುವುದರಿಂದ ಆರಂಭವಾಗಿಲ್ಲ ಎಂಬುದು ಸಿಬ್ಬಂದಿ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.