ADVERTISEMENT

ವೀಕ್ಷಕರಿಗಿಲ್ಲ ‘ಮಿಂಚುಳ್ಳಿ’ ದರ್ಶನ

​ಪ್ರಜಾವಾಣಿ ವಾರ್ತೆ
Published 17 ಜುಲೈ 2017, 19:30 IST
Last Updated 17 ಜುಲೈ 2017, 19:30 IST
ವೀಕ್ಷಕರಿಗಿಲ್ಲ ‘ಮಿಂಚುಳ್ಳಿ’ ದರ್ಶನ
ವೀಕ್ಷಕರಿಗಿಲ್ಲ ‘ಮಿಂಚುಳ್ಳಿ’ ದರ್ಶನ   

ಶಿವಮೊಗ್ಗ: ತ್ಯಾವರೆಕೊಪ್ಪ ಹುಲಿ–ಸಿಂಹಧಾಮದ ಪ್ರಮುಖ ಆಕರ್ಷಣೆ ಕರಿಚಿರತೆ ‘ಮಿಂಚುಳ್ಳಿ’ ದರ್ಶನ ಭಾಗ್ಯ ಇನ್ನು ಮುಂದೆ ವೀಕ್ಷಕರಿಗೆ ಲಭಿಸುವುದಿಲ್ಲ.

ಕೃತಿಕಾಗೆ 2012ರಲ್ಲಿ ಜನಿಸಿದ್ದ ಮಿಂಚುಳ್ಳಿ ಹೊರತುಪಡಿಸಿ ರಾಜ್ಯದ ಬೇರೆ ಯಾವ ಪ್ರಾಣಿ ಸಂಗ್ರಹಾಲಯದಲ್ಲೂ ಕರಿಚಿರತೆ ಇಲ್ಲ. ಶಿವಮೊಗ್ಗ ಜಿಲ್ಲಾ ಕೇಂದ್ರದಿಂದ 10 ಕಿ.ಮೀ. ದೂರದ ಸಿಂಹಧಾಮದಲ್ಲಿ ಇರುವ 21 ಚಿರತೆಗಳಲ್ಲಿ ಸಂಪೂರ್ಣ ಕರಿ ಬಣ್ಣ ಹೊಂದಿದ್ದು ಇದೊಂದೇ ಚಿರತೆ.

ಎರಡು ವರ್ಷಗಳ ಹಿಂದೆ ಅದಕ್ಕೆ ಕೂದಲು ಉದುರುವ ಕಾಯಿಲೆ(ಅಲೊಪೇಸಿಯಾ) ಕಾಣಿಸಿಕೊಂಡಿತ್ತು. ಹಲವು ದಿನಗಳ ಚಿಕಿತ್ಸೆಯ ನಂತರ ಗುಣಮುಖವಾಗಿತ್ತು. ಈಗ ಮತ್ತೆ ಅದೇ ಕಾಯಿಲೆಗೆ ತುತ್ತಾಗಿದ್ದು, ಇಡೀ ದೇಹದ ಕೂದಲು ಉದುರುತ್ತಿವೆ. ಹೀಗಾಗಿ, ಇತರೆ ಚಿರತೆಗಳಿಂದ ದೂರವಿಟ್ಟು ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಹೀಗಾಗಿ ಸಾರ್ವಜನಿಕ ದರ್ಶನಕ್ಕೆ ನಿರ್ಬಂಧಿಸಲಾಗಿದೆ.

ADVERTISEMENT

‘ಜೀವತಂತುಗಳ ವ್ಯತ್ಯಾಸದಿಂದ ಚಿರತೆ ಬಣ್ಣ ಬದಲಾಗುತ್ತದೆ. ಇತರೆ ಚಿರತೆಗಳಿಗಿಂತ ಕರಿಚಿರತೆಗಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ. ಕೂದಲು ಉದುರುವ ಸಮಸ್ಯೆ ಜೀವಕ್ಕೆ ಅಪಾಯ ಉಂಟುಮಾಡದಿದ್ದರೂ, ಪ್ರಾಕೃತಿಕ ಅಪಾಯ ಎದುರಿಸುವ ಶಕ್ತಿ ಕುಂದಿಸುತ್ತದೆ.

ಸಂಪೂರ್ಣ ರಕ್ತ ಪರೀಕ್ಷೆ (ಸಿಬಿಜಿ) ನಡೆಸಲು ಮಾದರಿ ಕಳುಹಿಸಲಾಗಿದೆ. ಕೋಳಿಮಾಂಸದ ಮೂಲಕ ಔಷಧ, ಮಾತ್ರೆ ನೀಡಲಾಗುತ್ತಿದೆ. ಮತ್ತೆ ವೀಕ್ಷಕರ ಮುಂದೆ ಕಾಣಿಸಿಕೊಳ್ಳುವ ಸಾಧ್ಯತೆ ಅತ್ಯಂತ ಕಡಿಮೆ’ ಎಂದು ವನ್ಯಜೀವಿ ವೈದ್ಯ ಡಾ.ವಿನಯ್ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.