ADVERTISEMENT

ವೀರರಾಣಿ ಅಬ್ಬಕ್ಕ ಪ್ರಶಸ್ತಿಗೆ ಆಯ್ಕೆ

ಗಾಯತ್ರಿ ನಾವಡ, ಶೀಲಾ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2014, 19:30 IST
Last Updated 3 ಫೆಬ್ರುವರಿ 2014, 19:30 IST
ಡಾ.ಗಾಯತ್ರಿ
ಡಾ.ಗಾಯತ್ರಿ   

ಮಂಗಳೂರು: ಹಿರಿಯ ಸ್ತ್ರೀವಾದಿ ಚಿಂತಕಿ, ಸಂಶೋಧಕಿ ಡಾ.ಗಾಯತ್ರಿ ವಿ. ನಾವಡ ಮತ್ತು ಲೇಖಕಿ, ಕಲಾ  ಸಂಘಟಕಿ ಶೀಲಾ ಕೆ.ಶೆಟ್ಟಿ ಅವರು 2014–15ನೇ ಸಾಲಿನ ವೀರರಾಣಿ ಅಬ್ಬಕ್ಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ತಲಾ ರೂ. 20 ಸಾವಿರ ನಗದು ಒಳಗೊಂಡ ಪ್ರಶಸ್ತಿಯನ್ನು ಇದೇ 17 ಮತ್ತು 18ರಂದು ಬಂಟ್ವಾಳ ತಾಲ್ಲೂಕು ಮುಡಿಪು ಕುರ್ನಾಡು ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ನಡೆಯುವ ವೀರ ರಾಣಿ ಅಬ್ಬಕ್ಕ ಉತ್ಸವ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರದಾನ ಮಾಡುವರು ಎಂದು ಉತ್ಸವದ ಸ್ವಾಗತ ಸಮಿತಿಯ ಅಧ್ಯಕ್ಷ ಕೆ.ಜಯರಾಮ ಶೆಟ್ಟಿ ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಅಬ್ಬಕ್ಕ ಉತ್ಸವವನ್ನು 11 ವರ್ಷಗಳಿಂದ ಆಚರಿಸಲಾಗುತ್ತಿದೆ. ಸರ್ಕಾರಿ ಉತ್ಸವವಾಗಿ ಈಗಾಗಲೇ ಗಮನ ಸೆಳೆದಿರುವ ಅಬ್ಬಕ್ಕ ಉತ್ಸವಕ್ಕೆ ಸರ್ಕಾರ ಈ ವರ್ಷ ರೂ. 35 ಲಕ್ಷ ಮಂಜೂರು ಮಾಡಿದೆ.

ಕಿರು ಪರಿಚಯ: ಡಾ. ಗಾಯತ್ರಿ ನಾವಡ: ಸಾಹಿತ್ಯ, ಜಾನಪದ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಡಾ. ಗಾಯತ್ರಿ ನಾವಡ ಅವರದು ವಿಶಿಷ್ಟ ಸಾಧನೆ. ತುಳು ಪಾಡ್ದನಗಳು, ಕಥನ ಕವನಗಳು ಪ್ರಕಟಿಸುವ ಸ್ತ್ರೀತ್ವದ ಶೋಧದ ಮೂಲಕ ಅವರು ಭಾರತೀಯ ಸ್ತ್ರೀವಾದದ ಪರಿಕಲ್ಪನೆಗೆ ಹೊಸ ಆಯಾಮ ನೀಡಿದ್ದಾರೆ. ಉಡುಪಿ ಜಿಲ್ಲೆ ಕೋಟೇಶ್ವರ ಮೂಲದ ಅವರು ಸದ್ಯ ಮಂಗಳೂರಿನಲ್ಲಿ ನೆಲೆಸಿದ್ದಾರೆ.

ಉಡುಪಿಯ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದಲ್ಲಿ ಸಂಶೋಧಕಿಯಾಗಿ ಕಾರ್ಯನಿರ್ವಹಿಸಿದ ಗಾಯತ್ರಿ ನಾವಡ ‘ಸಿರಿಪಂಥ’ ಕುರಿತು ಗುಲ್ಬರ್ಗ ಮತ್ತು ಮಣಿಪಾಲ ವಿಶ್ವವಿದ್ಯಾಲಯಗಳಿಂದ ಪಿಎಚ್‌.ಡಿ ಪಡೆದಿದ್ದಾರೆ. ಹಲವು ಸಂಶೋಧನೆ, ವಿಮರ್ಶಾ ಕೃತಿಗಳನ್ನು ರಚಿಸಿದ್ದಾರೆ.

ಶೀಲಾ ಕೆ. ಶೆಟ್ಟಿ: ಉಡುಪಿ ಜಿಲ್ಲೆ ಎರ್ಮಾಳಿನವರಾದ ಶೀಲಾ ಕೆ.ಶೆಟ್ಟಿ ಅವರು ಓದಿದ್ದು ಕೇವಲ 9ನೇ ತರಗತಿಯಾಗಿದ್ದರೂ, ನಾಟಕ ಮತ್ತು ಯಕ್ಷಗಾನಗಳಲ್ಲಿ ನಟರಾಗಿ, ವೇಷಧಾರಿಯಾಗಿ, ಸಂಘಟಕಿಯಾಗಿ ಮಾಡಿದ ಸಾಧನೆ ಅನನ್ಯ. ತೆಂಕುತಿಟ್ಟಿನಲ್ಲಿ ಪ್ರಪ್ರಥಮ ಮಹಿಳಾ ಯಕ್ಷಗಾನ ತಂಡವನ್ನು ಕಟ್ಟಿದ ಹೆಗ್ಗಳಿಕೆ ಅವರದು.

ತಮ್ಮ 14ನೇ ವಯಸ್ಸಿನಲ್ಲಿ ಹೋಟೆಲ್ ಉದ್ಯಮಿ ಕುಟ್ಟಿ ಕೆ. ಶೆಟ್ಟಯವರ ಕೈಹಿಡಿದು 15 ವರ್ಷ ಮುಂಬಯಿಯಲ್ಲಿ ನೆಲೆಸಿದ್ದ ಅವರು ಕನ್ನಡ ಮತ್ತು ತುಳು ಭಾಷೆಗಳಲ್ಲಿ ಕಥೆ, ಕವಿತೆ, ನಾಟಕಗಳನ್ನು ಬರೆದಿದ್ದಾರೆ. 18 ವರ್ಷಗಳಿಂದ ಉಡುಪಿ ತಾಲ್ಲೂಕು ಮಹಿಳಾ ಮಂಡಳಿಗಳ ಒಕ್ಕೂಟದ ಅಧ್ಯಕ್ಷೆಯಾಗಿರುವ ಶೀಲಾ ಶೆಟ್ಟಿ ಅವರು ಕರ್ನಾಟಕ ರಾಜ್ಯ ತೆಂಗುನಾರಿನ ಅಭಿವೃದ್ಧಿ ನಿಗಮದ ಅಧ್ಯಕ್ಷೆಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.