ADVERTISEMENT

ವೀರೇಂದ್ರ ಹೆಗ್ಗಡೆ ವಿರೋಧ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2011, 18:00 IST
Last Updated 19 ಫೆಬ್ರುವರಿ 2011, 18:00 IST

ಬಂಟ್ವಾಳ: ಜೈನ ಧಾರ್ಮಿಕ ಸಂಸ್ಥೆಗಳನ್ನು ಕರ್ನಾಟಕ ಧಾರ್ಮಿಕ ದತ್ತಿ ಕಾಯ್ದೆಯಡಿ ತರುವುದನ್ನು ಸಮಸ್ತ ಜೈನ ಸಮುದಾಯ ಖಂಡಿತವಾಗಿ ವಿರೋಧಿಸುತ್ತದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಶನಿವಾರ ಇಲ್ಲಿ ಹೇಳಿದರು.

ತಾಲ್ಲೂಕಿನ ಪಾಣೆ ಮಂಗಳೂರಿನ ಜೈನ ಬಸದಿಯಲ್ಲಿ ‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ಹಿಂದೂ ಮಠ ಮತ್ತು ಅವುಗಳ ಅಧೀನದಲ್ಲಿ ಬರುವ ಧಾರ್ಮಿಕ ದತ್ತಿ ಸಂಸ್ಥೆಗಳನ್ನು ಕರ್ನಾಟಕ ಧಾರ್ಮಿಕ ದತ್ತಿ ಕಾಯಿದೆ ವ್ಯಾಪ್ತಿಯಿಂದ ಹೊರಗಿಟ್ಟು, ಹೊಸದಾಗಿ ಜೈನ, ಬೌದ್ಧ ಮತ್ತು ಸಿಖ್ ಜನಾಂಗದವರ ಧಾರ್ಮಿಕ ಸಂಸ್ಥೆಗಳನ್ನು ಈ ಕಾಯ್ದೆಯಡಿ ತರುವ ವಿವಾದಾತ್ಮಕ ತೀರ್ಮಾನವನ್ನು ರಾಜ್ಯ ಸಚಿವ ಸಂಪುಟ ಗುರುವಾರ ತೆಗೆದುಕೊಂಡಿರುವುದು ಸರಿಯಲ್ಲ ಎಂದರು.

 ಜೈನ ಧರ್ಮಕ್ಕೆ ವಿಶೇಷ ಹಿನ್ನೆಲೆ ಮತ್ತು ಇತಿಹಾಸ ಇದ್ದರೂ ಹಿಂದೂ ಧರ್ಮದ ಜತೆ ಅವಿನಾಭಾವ ಸಂಬಂಧ ಮಾತ್ರ ಹೊಂದಿದೆ. ಜೈನ ಧರ್ಮ ‘ಪ್ರತ್ಯೇಕತೆ’ ಹೊಂದಿದೆ ಎಂದು ನುಡಿದರು.

ರಾಷ್ಟ್ರೀಯ ಮಟ್ಟದ ಸಂಘಟನೆ ಹೊಂದಿರುವ ಜೈನ ಸಮುದಾಯ ಬೆಂಗಳೂರಿನಲ್ಲಿ ಈಗಾಗಲೇ ಈ ಬಗ್ಗೆ ಚರ್ಚೆ ನಡೆಸಿದೆ. ಶೀಘ್ರ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಮುಜರಾಯಿ ಸಚಿವ ವಿ.ಎಸ್.ಆಚಾರ್ಯ ಅವರೊಂದಿಗೆ ಮಾತುಕತೆ ನಡೆಸಲಾಗುವುದು. ಜೈನ ಧರ್ಮವು ಹಿಂದೂ ಧರ್ಮದ ಅಧೀನವೆನ್ನಲು ಯಾವುದೇ ಪುರಾವೆ ಇಲ್ಲ. ಶಾಂತಿ-ಸೌಹಾರ್ದತೆ ಇನ್ನಿತರ ವೈಶಿಷ್ಟ್ಯದ ಜೈನಧರ್ಮ ಪ್ರತ್ಯೇಕತೆ ಬಗ್ಗೆ ಕಾನೂನಿನಂತೆ ಮನವರಿಕೆ ಮಾಡುವುದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.