ADVERTISEMENT

ವೃತ್ತಿಪರ ಕೋರ್ಸ್‌ಗಳ ಶುಲ್ಕ ನಿಗದಿ

ಎಂಜಿನಿಯರಿಂಗ್ ಶುಲ್ಕ ₹1,000 ಮಾತ್ರ ಏರಿಕೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2017, 19:51 IST
Last Updated 16 ಜೂನ್ 2017, 19:51 IST
ವೃತ್ತಿಪರ ಕೋರ್ಸ್‌ಗಳ ಶುಲ್ಕ ನಿಗದಿ
ವೃತ್ತಿಪರ ಕೋರ್ಸ್‌ಗಳ ಶುಲ್ಕ ನಿಗದಿ   

ಬೆಂಗಳೂರು: ವೃತ್ತಿಪರ ಕೋರ್ಸ್‌ಗಳ ಪ್ರವೇಶ ಶುಲ್ಕವನ್ನು ಶುಕ್ರವಾರ ಪ್ರಕಟಿಸಲಾಗಿದ್ದು, ಎಂಜಿನಿಯರಿಂಗ್ ಶುಲ್ಕ ಕಳೆದ ವರ್ಷಕ್ಕಿಂತ ₹ 500ರಿಂದ ₹1,000 ಹೆಚ್ಚಳ ಆಗಿದೆ.

ಆದರೆ, ಬಿ.ಎಸ್‌ಸಿ ಕೃಷಿ ಶುಲ್ಕವನ್ನು ಹಿಂದಿನ ಬಾರಿಗಿಂತ ಶೇ 15ರಷ್ಟು ಮತ್ತು ಪಶು ವೈದ್ಯ ವಿಜ್ಞಾನ ಕೋರ್ಸ್‌ ಶುಲ್ಕವನ್ನು ಶೇ 40ರಷ್ಟು ಹೆಚ್ಚಳ ಮಾಡಲಾಗಿದೆ. ಬಿ–ಫಾರ್ಮಾ ಮತ್ತು ಫಾರ್ಮಾ–ಡಿ ಕೋರ್ಸ್‌ಗೆ ಕಳೆದ ವರ್ಷದಷ್ಟೇ ಶುಲ್ಕ ಇದೆ.

ಎಂಜಿನಿಯರಿಂಗ್‌ಗೆ ಕನಿಷ್ಠ ಶೇ 10ರಷ್ಟು ಶುಲ್ಕ ಹೆಚ್ಚಳ ಮಾಡುವಂತೆ ಖಾಸಗಿ ಕಾಲೇಜುಗಳು ಪಟ್ಟು ಹಿಡಿದಿದ್ದವು. ಆದರೆ, ಸರ್ಕಾರ ಕಾಲೇಜು ಆಡಳಿತ ಮಂಡಳಿ ಮನವೊಲಿಸಿ ಬಹುತೇಕ ಕಳೆದ ವರ್ಷದ ಶುಲ್ಕವೇ ಮುಂದುವರಿಯುವಂತೆ ನೋಡಿಕೊಂಡಿದೆ.

ಕಳೆದ ವರ್ಷ ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳ ಎಂಜಿನಿಯರಿಂಗ್ ಶುಲ್ಕ (ಸಾಮಾನ್ಯ ವರ್ಗ) ₹ 18,090 ಇದ್ದದ್ದು, ಈ ಬಾರಿ ₹19,090ಕ್ಕೆ ಎರಿಕೆ ಆಗಿದೆ.

ಖಾಸಗಿ ಕಾಲೇಜುಗಳ ಶುಲ್ಕ ₹49,500ರಿಂದ ₹50,500ಕ್ಕೆ ಹೆಚ್ಚಳ ಆಗಿದೆ. ಬಿಎಸ್‌ಸಿ (ಕೃಷಿ) ಶುಲ್ಕ ಕಳೆದ ಬಾರಿ ₹20,820 ಇದ್ದದ್ದು, ಈ ಬಾರಿ ₹23,150ಗೆ ಹೆಚ್ಚಳವಾಗಿದ್ದರೆ, ಪಶು ವೈದ್ಯ ವಿಜ್ಞಾನ ಶುಲ್ಕ ₹33,790ರಿಂದ ₹47,370ಕ್ಕೆ ಏರಿದೆ.

ಎರಡು ದಿನಗಳ ಹಿಂದೆ ಸೀಟು ಮ್ಯಾಟ್ರಿಕ್ಸ್‌ ಪ್ರಕಟಿಸಿದ್ದು, ಈಗ ಆಯ್ಕೆ ದಾಖಲು (ಆಪ್ಷನ್ ಎಂಟ್ರಿ) ನಡೆಯುತ್ತಿದೆ. ಇದೇ 25ರಂದು ಸೀಟು ಹಂಚಿಕೆ ಮಾಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.