ADVERTISEMENT

ವೃತ್ತಿಪರ ಕೋರ್ಸ್ ಶುಲ್ಕ ಹೆಚ್ಚಳಕ್ಕೆ ಪಟ್ಟು

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2011, 17:35 IST
Last Updated 8 ಮಾರ್ಚ್ 2011, 17:35 IST

ಬೆಂಗಳೂರು: ಎಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ ಮತ್ತಿತರ ವೃತ್ತಿಪರ ಕೋರ್ಸ್‌ಗಳ ಶುಲ್ಕ ಜಾಸ್ತಿ ಮಾಡುವಂತೆ ಹಾಗೂ ಆಡಳಿತ ಮಂಡಳಿ ಸೀಟುಗಳ ಕೋಟಾ ಹೆಚ್ಚಿಸಲು ಖಾಸಗಿ ಶಿಕ್ಷಣ ಸಂಸ್ಥೆಗಳು ಬಿಗಿ ಪಟ್ಟು ಹಿಡಿದಿವೆ.

ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್.ಆಚಾರ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ.ರಾಮದಾಸ್ ಅವರು ಸೀಟು ಹಂಚಿಕೆ ಮತ್ತು ಶುಲ್ಕ ನಿಗದಿ ಸಂಬಂಧ ಖಾಸಗಿ ಶಿಕ್ಷಣ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಮಂಗಳವಾರ ಮಾತುಕತೆ ನಡೆಸಿದರು. ಆದರೆ ಖಾಸಗಿ ಶಿಕ್ಷಣ ಸಂಸ್ಥೆಗಳ ಬಿಗಿಪಟ್ಟಿನಿಂದಾಗಿ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಾಗಲಿಲ್ಲ ಎಂದು ಮೂಲಗಳು ತಿಳಿಸಿವೆ.

ಕಳೆದ ನಾಲ್ಕು ವರ್ಷಗಳಿಂದ ಶುಲ್ಕ ಜಾಸ್ತಿ ಮಾಡಿಲ್ಲ. ಬೋಧಕರ ವೇತನವನ್ನು ಈಚೆಗೆ ಜಾಸ್ತಿ ಮಾಡಲಾಗಿದೆ. ಹೊಸ ಕೋರ್ಸ್‌ಗಳ ಆರಂಭ ಮತ್ತು ಮಾನ್ಯತೆ ನವೀಕರಣಕ್ಕೆ ಹೆಚ್ಚಿನ ಶುಲ್ಕವನ್ನು ಭರಿಸಬೇಕಾಗಿದೆ.

ಹೀಗಾಗಿ ವೃತ್ತಿಶಿಕ್ಷಣ ಕೋರ್ಸ್‌ಗಳ ಶುಲ್ಕವನ್ನು ಜಾಸ್ತಿ ಮಾಡಬೇಕು ಎಂದು ಸಭೆಯಲ್ಲಿ ಭಾಗವಹಿಸಿದ್ದ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಆಗ್ರಹಿಸಿದರು.

ವೈದ್ಯಕೀಯ ವಿಭಾಗದಲ್ಲಿ ಶೇ 60 ಹಾಗೂ ಎಂಜಿನಿಯರಿಂಗ್‌ನಲ್ಲಿ ಶೇ 55ರಷ್ಟು ಸೀಟುಗಳನ್ನು ಆಡಳಿತ ಮಂಡಳಿಗೆ ಬಿಟ್ಟುಕೊಡಬೇಕು.

ಈಗಿನ ವಾಸ್ತವಿಕ ವೆಚ್ಚವನ್ನು ಆಧರಿಸಿ ಶುಲ್ಕವನ್ನು ನಿಗದಿಪಡಿಸಬೇಕು ಎಂಬುದು ಅವರ ಬೇಡಿಕೆ. ಎಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶಕ್ಕೆ ಪಿಯುಸಿಯಲ್ಲಿ ಶೇ 50ರಷ್ಟು ಅಂಕಗಳನ್ನು ಪಡೆದಿರಬೇಕು ಎಂದು ಎಐಸಿಟಿಇ ಆದೇಶ ಹೊರಡಿಸಿದ್ದು, ಇದರಿಂದ ಖಾಸಗಿ ಕಾಲೇಜುಗಳಿಗೆ ತೊಂದರೆಯಾಗಲಿದೆ. ಆದ್ದರಿಂದ ಮೊದಲಿನ ಹಾಗೆ ಶೇ 45ರಷ್ಟು ಅಂಕಗಳನ್ನು ಮಾನದಂಡವಾಗಿ ನಿಗದಿಪಡಿಸುವಂತೆ ಒತ್ತಡ ಹೇರಬೇಕು ಎಂದು ಕೆಲವರು ಸಭೆಯಲ್ಲಿ ಆಗ್ರಹಿಸಿದರು ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.