ADVERTISEMENT

ವೈದ್ಯರ ಥಳಿಸಿದ ಸಂಸದ ಅನಂತಕುಮಾರ ಹೆಗಡೆ

ಬೇಲಿಯೇ ಎದ್ದು ಹೊಲ ಮೇಯಿತು

​ಪ್ರಜಾವಾಣಿ ವಾರ್ತೆ
Published 3 ಜನವರಿ 2017, 19:30 IST
Last Updated 3 ಜನವರಿ 2017, 19:30 IST
ಡಾ. ಜಿ.ವಿ.ಮಧುಕೇಶ್ವರ
ಡಾ. ಜಿ.ವಿ.ಮಧುಕೇಶ್ವರ   
ಶಿರಸಿ: ಕಾಲಿಗೆ ಗಾಯವಾಗಿದ್ದ ತಮ್ಮ ತಾಯಿಗೆ ವೈದ್ಯರು ಸಕಾಲದಲ್ಲಿ ಚಿಕಿತ್ಸೆ ನೀಡಲಿಲ್ಲ ಎಂದು ಆರೋಪಿಸಿ, ಉತ್ತರಕನ್ನಡ ಸಂಸದ ಅನಂತಕುಮಾರ ಹೆಗಡೆ ಸೋಮವಾರ ರಾತ್ರಿ ಇಲ್ಲಿನ ಟಿಎಸ್‌ಎಸ್‌ ಆಸ್ಪತ್ರೆಯ ಇಬ್ಬರು ವೈದ್ಯರನ್ನು ಥಳಿಸಿದ ಘಟನೆ ವರದಿಯಾಗಿದೆ.
 
ಮನೆಯಲ್ಲಿ ಬಿದ್ದು ಗಾಯಗೊಂಡಿದ್ದ ಅವರ ತಾಯಿ ಲಲಿತಾ ಹೆಗಡೆ ಸಂಬಂಧಿಕರೊಂದಿಗೆ ಸಂಜೆ 7ರ ಸುಮಾರಿಗೆ ಇಲ್ಲಿನ ಟಿ.ಎಸ್.ಎಸ್‌ ಆಸ್ಪತ್ರೆಗೆ ಬಂದಿದ್ದರು.
 
ಅವರನ್ನು ಪರೀಕ್ಷಿಸಿದ ಎಲುಬು ಮತ್ತು ಕೀಲು ತಜ್ಞ ಡಾ. ಜಿ.ವಿ.ಮಧುಕೇಶ್ವರ, ಮೂಳೆ ಮುರಿದಿದೆ ಎಂದು ತಿಳಿಸಿ, ಮತ್ತೊಬ್ಬ ರೋಗಿಗೆ ಶಸ್ತ್ರಚಿಕಿತ್ಸೆ ನಡೆಸಲು ಹೋಗಿದ್ದರು. ಹಾಗಾಗಿ ಸಂಸದರ ತಾಯಿ ಹೊರರೋಗಿ ವಿಭಾಗದಲ್ಲಿಯೇ ಕಾದು ಕುಳಿತಿದ್ದರು. ಈ ವಿಷಯ ತಿಳಿದು ಕುಪಿತರಾದ ಅನಂತಕುಮಾರ ಹೆಗಡೆ, ರಾತ್ರಿ 11ರ ಸುಮಾರಿಗೆ ಆಸ್ಪತ್ರೆಗೆ ಬಂದು, ‘ಸಂಸದರ ತಾಯಿಗೆ ಸರಿಯಾಗಿ ಚಿಕಿತ್ಸೆ ನೀಡದ ನೀವು ಸಾಮಾನ್ಯ ಜನರಿಗೆ ಹೇಗೆ ಸ್ಪಂದಿಸುತ್ತೀರಿ?’ ಎಂದು ತರಾಟೆಗೆ ತೆಗೆದುಕೊಂಡರು.
 
ಈ ಸಂದರ್ಭದಲ್ಲಿ ಮಾತು ವಿಕೋಪಕ್ಕೆ ತಿರುಗಿ, ಡಾ. ಮಧುಕೇಶ್ವರ,  ಡಾ. ಬಾಲಚಂದ್ರ ಭಟ್ಟ ಮತ್ತು ಸಿಬ್ಬಂದಿ ರಾಹುಲ್‌ ಮೇಲೆ ಹಲ್ಲೆ ನಡೆಸಿದರು. ಘಟನೆಯಲ್ಲಿ ಮೂವರಿಗೂ ಗಾಯಗಳಾಗಿವೆ.
 
**
 
(ಆಸ್ಪತ್ರೆ ಆವರಣದಲ್ಲಿ ವೈದ್ಯರ ಮೇಲೆ ಹಲ್ಲೆ ನಡೆಸುತ್ತಿರುವ ಸಂಸದ)
 
 
**
 
ನಡುರಾತ್ರಿಯಲ್ಲಿಯೇ ಸಭೆ ಸೇರಿದ ಸ್ಥಳೀಯ ಐಎಂಎ ಸದಸ್ಯರು ಸಂಸದರ ವರ್ತನೆಯನ್ನು ಖಂಡಿಸಿದರು. ಆಸ್ಪತ್ರೆಯ ಅಧ್ಯಕ್ಷ ಶಾಂತಾರಾಮ ಹೆಗಡೆ ಅವರು, ಸಂಸದರು ಮತ್ತು ನಗರದ ವೈದ್ಯರನ್ನು ಒಟ್ಟಾಗಿ ಸೇರಿಸಿ ರಾಜೀ ಸಂಧಾನ ನಡೆಸಿದರು. ಪರಿಣಾಮವಾಗಿ ಪೊಲೀಸರಿಗೆ ದೂರು ಸಲ್ಲಿಕೆಯಾಗಿಲ್ಲ.
 
ಪ್ರತಿಭಟನೆ: ಸಂಸದರ ಈ ವರ್ತನೆಯನ್ನು ಖಂಡಿಸಿ ಮಂಗಳವಾರ ನಗರದಲ್ಲಿ ವೈದ್ಯರು ಪ್ರತಿಭಟನೆ ನಡೆಸಿ, ಉಪ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು. 
 
ಈ ಸಂದರ್ಭದಲ್ಲಿ ಮಾತನಾಡಿದ ಐಎಂಎ ಘಟಕದ ಅಧ್ಯಕ್ಷ ಡಾ. ಕೈಲಾಶ್ ಪೈ, ‘ಕರ್ತವ್ಯದಲ್ಲಿದ್ದ ವೈದ್ಯರು ರೋಗಿಯ ಚಿಕಿತ್ಸೆಗೆ ಸ್ಪಂದಿಸಿದ್ದಾರೆ. ಆದರೂ ಜವಾಬ್ದಾರಿ ಸ್ಥಾನದಲ್ಲಿರುವ ಸಂಸದರು ಕಾನೂನುಬಾಹಿರವಾಗಿ ಹಲ್ಲೆ ನಡೆಸಿರುವುದು ಅಪರಾಧವಾಗಿದೆ. ಇಂತಹ ಘಟನೆಗಳು ವೈದ್ಯರ ಮನೋಸ್ಥೈರ್ಯವನ್ನು ಕುಗ್ಗಿಸುತ್ತವೆ. ವೈದ್ಯರಿಗೆ ರಕ್ಷಣೆ ನೀಡಬೇಕು’ ಎಂದರು.
 
ಈ ಕುರಿತು ಐಎಂಎ ಕಾನೂನು ವಿಭಾಗದ ಪ್ರಮುಖರ ಜತೆ ಚರ್ಚಿಸಿ, ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು. ಘಟನೆ ಬಗ್ಗೆ ಯಾವುದೇ ಹೇಳಿಕೆ ನೀಡುವುದಿಲ್ಲ ಎಂದು ಅನಂತಕುಮಾರ ಹೆಗಡೆ ಪ್ರತಿಕ್ರಿಯಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.