ಲಿಂಗಸುಗೂರ (ಮಸ್ಕಿ): ಕೃಷ್ಣಾ ಮೇಲ್ದಂಡೆ ಯೋಜನೆಯ ನಾರಾಯಣಪುರ ಸೂಪರಿಂಟೆಂಡೆಂಟ್ ಎಂಜಿನಿಯರ್ ಕಚೇರಿಯ ವ್ಯವಸ್ಥಾಪಕರಾಗಿ ನಿವೃತ್ತಿಯಾಗಿದ್ದ ಷಡಕ್ಷರಯ್ಯಸ್ವಾಮಿ ಸಂಗಯ್ಯಸ್ವಾಮಿ ಹಿರೇಮಠ ನಂದಾಪೂರ ಅವರು ಭಾನುವಾರ ಮಸ್ಕಿ ಪಟ್ಟಣದಲ್ಲಿ ಹೃದಯಾಘಾತದಿಂದ ನಿಧನರಾದರು. ಅವರ ದೇಹವನ್ನು ವೈದ್ಯಕೀಯ ಕಾಲೇಜಿಗೆ ದಾನ ಮಾಡಲಾಗಿದೆ.
ಷಡಕ್ಷರಯ್ಯ ಅವರು ತಮ್ಮ ಜೀವಿತಾವಧಿಯಲ್ಲಿ ಸದಾಕಾಲ ಅಂಗಿ ಜೇಬಿನಲ್ಲಿ ಪೇಪರ್‌ಮಿಂಟ್ ತುಂಬಿಕೊಂಡು ಹಾದಿಯುದ್ದಕ್ಕೂ ಸಂಚರಿಸುವ ಮಕ್ಕಳಿಗೆ ಹಂಚುತ್ತಿದ್ದರು. ಹೀಗಾಗಿ ಅವರನ್ನು ಪೇಪರ್‌ಮಿಂಟ್ ತಾತಾ ಎಂದೇ ಕರೆಯಲಾಗುತ್ತಿತ್ತು.
1992ರಲ್ಲಿ ನಿವೃತ್ತಿ ಹೊಂದಿದ್ದ ಷಡಕ್ಷರಯ್ಯ ಹಿರೇಮಠ ತಮ್ಮ ಸಾವಿನ ನಂತರ ದೇಹವನ್ನು ಯಾವುದಾದರೂ ಮೆಡಿಕಲ್ ಕಾಲೇಜಿಗೆ ದಾನ ಮಾಡುವಂತೆ ಕುಟುಂಬದವರನ್ನು ಕೇಳಿಕೊಂಡಿದ್ದರು. ಅವರ ಅಭಿಲಾಷೆಯಂತೆ ರಾಯಚೂರಿನ ರಿಮ್ಸ ಮೆಡಿಕಲ್ ಕಾಲೇಜಿಗೆ ಭಾನುವಾರ ಮೃತದೇಹವನ್ನು ದಾನವಾಗಿ ನೀಡಲಾಯಿತು.
ಮೃತರ ಮಗ ಗವಿಸಿದ್ದೇಶ್ವರಸ್ವಾಮಿ ಮತ್ತು ಮಗಳು ಸುವರ್ಣ ಅವರು ಈ ಸಂದರ್ಭದಲ್ಲಿ ಮಾತನಾಡಿ, ತಮ್ಮ ತಂದೆ ಅಂತ್ಯಕಾಲದಲ್ಲಿ ಇಂತಹ ನಿರ್ಧಾರ ತೆಗೆದುಕೊಂಡಿರುವುದು ನೋವು ತಂದಿದೆ. ಆದರೆ ಅವರು ಮೆಡಿಕಲ್ ವಿದ್ಯಾರ್ಥಿ ಸಮೂಹಕ್ಕೆ ಅನುಕೂಲ ಆಗುವ ಉದ್ದೇಶದಿಂದ ತೆಗೆದುಕೊಂಡಿರುವ ನಿರ್ಣಯಕ್ಕೆ ಕುಟುಂಬ ಸಂಪೂರ್ಣ ಬೆಂಬಲ ನೀಡಿದ್ದು ಆಸ್ಪತ್ರೆಗೆ ಖುಷಿಯಿಂದಲೆ ದೇಹವನ್ನು ಒಪ್ಪಿಸುತ್ತಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ `ಪ್ರಜಾವಾಣಿ~ಗೆ ಪ್ರತಿಕ್ರಿಯೆ ನೀಡಿದ ಡಾ. ಶಿವಶರಣಪ್ಪ ಇತ್ಲಿ, ತ್ರಿಯಂಬಕೇಶ್ವರಯ್ಯ, ಲಾಲ ಅಹ್ಮದ ಸಾಬ ಅವರು, ಷಡಕ್ಷರಯ್ಯ ಹಿರೇಮಠ ತೆಗೆದುಕೊಂಡಿರುವ ನಿಲುವು ತಾಲ್ಲೂಕಿನ ಪ್ರತಿಯೋರ್ವ ವ್ಯಕ್ತಿಗೆ ಮಾರ್ಗದರ್ಶಕವಾಗಿದೆ. ತಾಲ್ಲೂಕಿನಲ್ಲಿಯೆ ಮೊಟ್ಟ ಮೊದಲ ಬಾರಿಗೆ ದೇಹದಾನ ಮಾಡಿದ ಕೀರ್ತಿ ಷಡಕ್ಷರಯ್ಯ ಕುಟುಂಬಕ್ಕೆ ಸಲ್ಲುತ್ತದೆ ಎಂದು ಬಣ್ಣಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.