ಉಡುಪಿ: ಗ್ರಂಥಾಲಯದಿಂದ ಮನೆಗೆ ಹೋಗುತ್ತಿದ್ದ ವೈದ್ಯಕೀಯ ವಿದ್ಯಾರ್ಥಿನಿಯನ್ನು ಆಟೊರಿಕ್ಷಾದಲ್ಲಿ ಅಪಹರಿಸಿದ ಮೂವರು ದುಷ್ಕರ್ಮಿಗಳು ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಮಣಿಪಾಲದಲ್ಲಿ ಗುರುವಾರ ರಾತ್ರಿ ನಡೆದಿದೆ.
ತೀವ್ರವಾಗಿ ಗಾಯಗೊಂಡು ಮಾನಸಿಕ ಅಘಾತಕ್ಕೆ ಒಳಗಾಗಿರುವ ವಿದ್ಯಾರ್ಥಿನಿಯನ್ನು ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅತ್ಯಾಚಾರಕ್ಕೆ ಒಳಗಾಗಿರುವ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ಮಣಿಪಾಲ ಠಾಣೆ ಪೊಲೀಸರು ತಿಳಿಸಿದ್ದಾರೆ. ಕೇರಳ ಮೂಲದ ವಿದ್ಯಾರ್ಥಿನಿ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ 4ನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ವಿವಿಯ ವಿದ್ಯಾರ್ಥಿ ನಿಲಯದಲ್ಲಿ ಉಳಿದುಕೊಳ್ಳದ ಅವರು ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ರಾತ್ರಿ ಊಟ ಮುಗಿಸಿ ವಿವಿಯ ಮುಖ್ಯ ಆವರಣದಲ್ಲಿರುವ ಗ್ರಂಥಾಲಯಕ್ಕೆ ಹೋಗಿದ್ದರು.
11 ಗಂಟೆ ಸುಮಾರಿಗೆ ಗ್ರಂಥಾಲಯದಿಂದ ಹೊರ ಬಂದ ಅವರು ಮನೆಗೆ ನಡೆದುಕೊಂಡು ಹೋಗುತ್ತಿದ್ದರು. ಆಗ ಅವ ರನ್ನು ಇಬ್ಬರು ದುಷ್ಕರ್ಮಿಗಳು ಆಟೊದಲ್ಲಿ ಅಪಹರಿಸಿದರು. ಇಲ್ಲಿಂದ ಸ್ವಲ್ಪ ದೂರದಲ್ಲಿಯೇ ಕರ್ತವ್ಯದಲ್ಲಿದ್ದ ಭದ್ರತಾ ಸಿಬ್ಬಂದಿ ಇದನ್ನು ಗಮನಿಸಿ ಕೂಡಲೇ ಭದ್ರತಾ ವಿಭಾಗದ ಮುಖ್ಯಸ್ಥರಿಗೆ ಮಾಹಿತಿ ನೀಡಿ ಆಟೊವನ್ನು ಹಿಂಬಾಲಿಸಲು ಯತ್ನಿಸಿದರು. ಆದರೆ ವೇಗವಾಗಿ ತೆರಳಿದ ಆಟೊ ರಾತ್ರಿಯ ಕತ್ತಲಲ್ಲಿ ಪರಾರಿಯಾಯಿತು.
ಭದ್ರತಾ ಸಿಬ್ಬಂದಿ ವಿವಿಯ ಎಸ್ಟೇಟ್ ಆಫೀಸರ್ ಎ.ಎಸ್.ಜೈವಿಠಲ್ ಅವರಿಗೆ ವಿಷಯ ತಿಳಿಸಿದರು. ಅವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು 8 ವಾಹನಗಳಲ್ಲಿ ತಂಡ ರಚಿಸಿ ರಾತ್ರಿ ದುಷ್ಕರ್ಮಿಗಳಿಗಾಗಿ ಹುಡುಕಾಟ ಆರಂಭಿಸಿದರು. ಮಧ್ಯರಾತ್ರಿ 2.30ರವರೆಗೂ ಶೋಧ ಕಾರ್ಯ ನಡೆದಿತ್ತು. ಆದರೆ 2.45ರ ಸುಮಾರಿಗೆ ವಿದ್ಯಾರ್ಥಿನಿಯೇ ತಮ್ಮ ಮನೆಗೆ ಬಂದು ಗೆಳತಿಗೆ ನಡೆದ ಘಟನೆ ವಿವರಿಸಿದರು. ತಕ್ಷಣ ವಿಷಯವನ್ನು ವಿವಿ ಆಡಳಿತ ಮಂಡಳಿ ಅಧಿಕಾರಿಗಳಿಗೆ ತಿಳಿಸಲಾಯಿತು. ಬಳಿಕ ಅಲ್ಲಿಗೆ ಬಂದ ಪೊಲೀಸರು ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಿದರು. ಯುವತಿ ಮುಖದ ಭಾಗ, ಕಾಲು ಹಾಗೂ ದೇಹದ ವಿವಿಧ ಭಾಗಗಳಲ್ಲಿ ತರಚಿದ ಗಾಯಗಳಾಗಿವೆ. ವಿದ್ಯಾರ್ಥಿನಿಯ ಹೇಳಿಕೆ ಪಡೆಯಲು ಯತ್ನಿಸಿದರೂ ಅವರು ಸ್ಪಂದಿಸದ ಕಾರಣ ಹೇಳಿಕೆಯನ್ನು ಇದುವರೆಗೆ ಪಡೆದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಸಿ.ಸಿ.ಕ್ಯಾಮೆರಾ ದೃಶ್ಯಾವಳಿ ಅಸ್ಪಷ್ಟ: ವಿವಿಯ ಆವರಣದಲ್ಲಿನ ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ಆಟೊ ರಿಕ್ಷಾವು ವಿದ್ಯಾರ್ಥಿನಿಯನ್ನು ಹತ್ತಿಸಿಕೊಂಡು ಹೋಗಿರುವ ದೃಶ್ಯ ದಾಖಲಾಗಿದೆ. ಆದರೆ ಬಹಳ ದೂರದಿಂದ ದೃಶ್ಯಗಳು ಸೆರೆಯಾಗಿರುವುದರಿಂದ ರಿಕ್ಷಾದ ನೋಂದಣಿ ಸಂಖ್ಯೆ ಸ್ಪಷ್ಟವಾಗಿ ಗೊತ್ತಾಗಿಲ್ಲ. ದುಷ್ಕರ್ಮಿಗಳನ್ನು ಬಂಧಿಸಲು ವಿಶೇಷ ತಂಡ ರಚಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಬೋರಲಿಂಗಯ್ಯ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.