ADVERTISEMENT

ವೈಭವದ ಅಷ್ಟತೀರ್ಥೋತ್ಸವ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2011, 19:30 IST
Last Updated 5 ನವೆಂಬರ್ 2011, 19:30 IST
ವೈಭವದ ಅಷ್ಟತೀರ್ಥೋತ್ಸವ
ವೈಭವದ ಅಷ್ಟತೀರ್ಥೋತ್ಸವ   

ಮೇಲುಕೋಟೆ: ಸಂತಾನ ಫಲ ಕರುಣಿಸುವ ಉತ್ಸವ ಎಂದೇ ಖ್ಯಾತಿ ಪಡೆದ ಚೆಲುವನಾರಾಯಣ ಸ್ವಾಮಿಯ ಅಷ್ಟ ತೀರ್ಥೋತ್ಸವದಲ್ಲಿ ಶನಿವಾರ ನೂರೈವತ್ತಕ್ಕೂ ಹೆಚ್ಚು ಗೃಹಿಣಿಯರು ಮಡಿಲು ತುಂಬಿಕೊಂಡು ಬೆಟ್ಟಗುಡ್ಡಗಳ ನಡುವೆ 25 ಕಿ.ಮೀ, ಕ್ರಮಿಸಿ ಹರಕೆ ಪೂರೈಸಿದರು.

ಎಡಬಿಡದೆ ಸುರಿದ ಮಳೆಯನ್ನೂ ಲೆಕ್ಕಿಸದೆ ಭಕ್ತರು ಉತ್ಸವದಲ್ಲಿ ಪಾಲ್ಗೊಂಡರು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಗೃಹಿಣಿಯರು ಮಡಿಲು ತುಂಬಿಕೊಡು ಎಂಟು ತೀರ್ಥಗಳಲ್ಲಿ ಸ್ನಾನ ಮಾಡುವ ಮೂಲಕ ಸಂತಾನ ಪ್ರಾಪ್ತಿಗಾಗಿ ಪ್ರಾರ್ಥನೆ ಸಲ್ಲಿಸಿದರು. ಉತ್ಸವದಲ್ಲಿ ಪಾಲ್ಗೊಂಡ ಮಹಿಳೆಯರು ಕಲ್ಯಾಣಿಯಲ್ಲಿ ಸ್ನಾನ ಮಾಡಿ ಸ್ವಾಮಿಯ ಪ್ರಸಾದ ಸ್ವೀಕರಿಸಿ ಮುತ್ತೈದೆಯರಿಂದ ಮಡಿಲು ತುಂಬಿಸಿಕೊಂಡರು.
 
ಪಲ್ಲಕ್ಕಿಯಲ್ಲಿ ಸಾಗಿದ ಪಾದುಕೆಯ ಮೆರವಣಿಗೆ ಜೊತೆಗೆ ಸಾಲಿನಲ್ಲಿ ಸಾಗಿದರು. ವೇದ ಮಂತ್ರಗಳನ್ನು ಆಲಿಸುತ್ತಾ ಕಲ್ಲು ಮುಳ್ಳುಗಳ ಹಾದಿ ಲೆಕ್ಕಿಸದೆ ಮೇಲುಕೋಟೆಯ ಬೆಟ್ಟಗುಡ್ಡಗಳ ನಡುವೆ ನಡೆದರು. ಮಳೆಯನ್ನು ಲೆಕ್ಕಿಸದೆ ಸರತಿ ಸಾಲಿನಲ್ಲಿ ಸಾಗುತ್ತಿದ್ದ ಭಕ್ತರ ದಂಡು ನೆರೆದವರಲ್ಲಿ ಭಕ್ತಿ ಭಾವ ಮೇಳೈಸುವಂತೆ ಮಾಡಿತು.

ವಜ್ರಖಚಿತ ಕಿರೀಟ: ಆಚಾರ್ಯ ರಾಮಾನುಜರೊಂದಿಗೆ ವಜ್ರಖಚಿತ ರಾಜಮುಡಿ ಕಿರೀಟಧಾರಣೆಯೊಂದಿಗೆ ಚೆಲುವರಾಯಸ್ವಾಮಿಯ ಉತ್ಸವ ಕಲ್ಯಾಣಿಯಲ್ಲಿ ನೆರವೇರಿತು. ಅಲ್ಲಿ ಬಂಗಾರದ ಪಾದುಕೆಗೆ ವೇದಘೋಷಗಳೊಂದಿಗೆ ಅಭಿಷೇಕ ನೆರವೇರಿಸಲಾಯಿತು.

ನಂತರ ವೇದಪುಷ್ಕರಣಿ, 500 ಅಡಿ ಎತ್ತರದ ಬೃಹತ್ ಬಂಡೆಯ ಮೇಲಿನ ಧನುಷ್ಕೋಟಿ, ಯಾದವಾ ತೀರ್ಥ, ದರ್ಭತೀರ್ಥ, ಪಲಾಶರ ತೀರ್ಥ, ಪದ್ಮ ತೀರ್ಥ, ನರಸಿಂಹ ತೀರ್ಥ, ನಾರಾಯಣ ತೀರ್ಥಗಳಲ್ಲಿ ಸ್ವಾಮಿಯ ಪಾದುಕೆಗೆ ಅಭಿಷೇಕ ನೆರವೇರಿಸಲಾಯಿತು. ಕೊನೆಗೆ ತೊಟ್ಟಿಲು ಮಡುವಿನಲ್ಲಿ ಅಭಿಷೇಕ ಮುಕ್ತಾಯ ಕಂಡಿತು.

ತೊಟ್ಟಿಲು ಮಡು ಬಳಿ ಸಂಜೆ ನಡೆದ ಜಾತ್ರೆಯಲ್ಲಿ ಸುತ್ತಲಿನ ವಿವಿಧ ಸ್ಥಳಗಳಿಂದ ಬಂದ ಸಾವಿರಾರು ಭಕ್ತರು ಭಾಗವಹಿಸಿದ್ದರು. ಶುಕ್ರವಾರ ರಾತ್ರಿ ಚೆಲುವರಾಯಸ್ವಾಮಿಗೆ ಮೈಸೂರು ಅರಸ ರಾಜ ಒಡೆಯರ್ ಸಮರ್ಪಿಸಿರುವ ವಜ್ರಖಚಿತ ರಾಜಮುಡಿ ಕಿರೀಟಧಾರಣೆ ಮಾಡಿ ಉತ್ಸವ ನೆರವೇರಿಸಲಾಯಿತು.

ಮಂಡ್ಯ ಜಿಲ್ಲಾ ಖಜಾನೆಯಲ್ಲಿದ್ದ ಸ್ವಾಮಿಯ ಕಿರೀಟವನ್ನು ಪೊಲೀಸರ ಭದ್ರತೆಯಲ್ಲಿ ಮೇಲುಕೋಟೆಗೆ ತಂದ ನಂತರ ಪಾಂಡವಪುರ ತಹಶೀಲ್ದಾರ್ ಶಿವಾನಂದ ಮೂರ್ತಿ ಸಮ್ಮುಖದಲ್ಲಿ ರಾತ್ರಿ 8ಗಂಟೆಗೆ ಚೆಲುವರಾಯ      ಸ್ವಾಮಿಗೆ ಧಾರಣೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.