ADVERTISEMENT

'ವ್ಯವಸ್ಥೆ ಅವಮಾನಿಸಿದಂತೆ'

ಮಠದ ಮೇಲೆ ತೆರಿಗೆ ದಾಳಿಗೆ ಹೆಗ್ಗಡೆ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2013, 19:59 IST
Last Updated 19 ಜುಲೈ 2013, 19:59 IST

ಚಿತ್ರದುರ್ಗ: `ಮಠಗಳು, ಆಶ್ರಮಗಳು ಹಾಗೂ ಅವುಗಳು ನಡೆಸುವ ವಿದ್ಯಾ ಸಂಸ್ಥೆಗಳ ಮೇಲೆ ಒಂದು ರೀತಿಯ ನಿಯಂತ್ರಣ ಇರಬೇಕು. ಹಾಗೆಂದು ಸೇವಾ ಸಂಸ್ಥೆಗಳ ಮೇಲೆ ತೆರಿಗೆ ಅಧಿಕಾರಿಗಳು ಏಕಾಏಕಿ ದಾಳಿ ಮಾಡುವುದು ಅವುಗಳ ವ್ಯವಸ್ಥೆಯನ್ನೇ ಅನುಮಾನಿಸುವಂತೆ ಮಾಡುತ್ತದೆ' ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.

ನಗರದಲ್ಲಿ ಶುಕ್ರವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರು `ಆದಿಚುಂಚನಗಿರಿ ಮಠದ ಮೇಲಿನ ತೆರಿಗೆ ಅಧಿಕಾರಿಗಳ ದಾಳಿ' ಕುರಿತು ಕೇಳಿದ ಪ್ರಶ್ನೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದರು.

`ಸಾಮಾನ್ಯವಾಗಿ ಎಲ್ಲ ಮಠ ಮಾನ್ಯಗಳು, ಅವು ನಡೆಸುವ ಶಿಕ್ಷಣ ಸಂಸ್ಥೆಗಳು ಸರ್ಕಾರಕ್ಕೆ ಲೆಕ್ಕಪತ್ರಗಳನ್ನು ಸಲ್ಲಿಸುತ್ತವೆ. ಜೊತೆಗೆ ವಾರ್ಷಿಕವಾಗಿ `ಲೆಕ್ಕ ಪರಿಶೋಧನೆ' (ಆಡಿಟ್) ಕೂಡ ಮಾಡಿಸಿರುತ್ತಾರೆ. ಇವುಗಳಲ್ಲಿ ಏನಾದರೂ ವ್ಯತ್ಯಾಸಗಳಿದ್ದರೆ ತೆರಿಗೆ ಅಧಿಕಾರಿಗಳು ಕಾನೂನು ರೀತಿ ಕ್ರಮ ಕೈಗೊಳ್ಳಲಿ. ಅದು ಬಿಟ್ಟು, ಹೀಗೆ ಮಠದ ಮೇಲೆ ದಾಳಿ ನಡೆಸಿರುವುದು ಅಚ್ಚರಿ ಮೂಡಿಸಿದೆ' ಎಂದು ಹೇಳಿದರು.

`ನದಿ ತಿರುವು' ಪದ ಬದಲಿಸಿ: ನೇತ್ರಾವತಿ ನದಿ ತಿರುವ ಯೋಜನೆಗೆ ದಕ್ಷಿಣ ಕನ್ನಡ ಜಿಲ್ಲೆಯ ಜನರ ಆಕ್ಷೇಪ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, `ನೇತ್ರಾವತಿ ನದಿ ತಿರುವು ಎಂಬ ಪದವೇ, ಆ ನದಿ ನೀರನ್ನು ಅವಲಂಬಿಸಿ ಕೃಷಿ ಮಾಡುತ್ತಿರುವ ನಮ್ಮ ಜಿಲ್ಲೆಯ ರೈತರಲ್ಲಿ ಭಯ ಹುಟ್ಟಿಸಿದೆ. ಹಾಗಾಗಿ ಸರ್ಕಾರ `ನದಿ ತಿರುವು' ಎಂಬ ಪದವನ್ನೇ ಕೈಬಿಡಬೇಕು ಎಂದು ಹೇಳಿದರು

ಬಸದಿಯಲ್ಲಿ ಕಳವು: `ಜೈನ ಕಾಶಿ ಮೂಡುಬಿದಿರೆಯ ಮಂದಿರದಲ್ಲಿ ಇತ್ತೀಚೆಗೆ ನಡೆದ ಕಳವಿನಲ್ಲಿ ಸ್ಥಳೀಯರು ಭಾಗಿಯಾಗಿದ್ದಾರೆ ಎಂದು ಇತ್ತೀಚೆಗೆ ಸಚಿವರೇ ಹೇಳಿಕೆ ನೀಡಿದ್ದಾರಲ್ಲಾ' ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, `ಪ್ರಕರಣದ ತನಿಖೆ ನಡೆದು ಒಡಿಶಾದ ವ್ಯಕ್ತಿಗಳ ಕೈವಾಡವಿದೆ ಎಂದು ಗೊತ್ತಾಗಿದೆ. ಮತ್ತೂ ಅನುಮಾನಗಳಿದ್ದರೆ ತನಿಖೆ ಮಾಡಲಿ ಎಂದು ಹೆಗ್ಗಡೆ ಹೇಳಿದರು.

ಅಮೃತ್ ಕಾವಲ್ ಸಮಸ್ಯೆಗೆ ಪರಿಹಾರ: ಕೇಂದ್ರ ಸ್ವಾಯತ್ತ ಸಂಸ್ಥೆಗಳಿಗೆ ಅಮೃತ್ ಮಹಲ್ ಕಾವಲ್‌ನ ಸಾವಿರಾರು ಎಕರೆ ಭೂ ಸ್ವಾಧೀನ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು,   ಸರ್ಕಾರಿ ಕೆಲಸಗಳಿಗೆ ಅನೇಕ ಕೃಷಿ ಜಮೀನುಗಳು ಬಲಿಯಾಗಿವೆ. ಹಿಂದೆ ಕೆಲವು ರೈತರು ಗೋಶಾಲೆಗಾಗಿ ಜಮೀನುಗಳನ್ನು ಬರೆದುಕೊಟ್ಟಿದ್ದಾರೆ. ಇದೂ ಗೋವಿಗೆ ಮೇವು ನೀಡುವ ತಾಣ ಎನ್ನುತ್ತಿದ್ದೀರಿ.  ಆ ಜಾಗ ಕರಗದಂತೆ ರಕ್ಷಿಸಿ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.