ADVERTISEMENT

ಶಂಕಿತ ಹಂತಕರ ರೇಖಾಚಿತ್ರ ಬಿಡುಗಡೆ

ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯದಲ್ಲಿ ಆರೋಪಿಗಳ ಓಡಾಟ ಸೆರೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2017, 19:30 IST
Last Updated 14 ಅಕ್ಟೋಬರ್ 2017, 19:30 IST
ಶಂಕಿತ ಹಂತಕರ ಹೋಲುವ ರೇಖಾಚಿತ್ರ
ಶಂಕಿತ ಹಂತಕರ ಹೋಲುವ ರೇಖಾಚಿತ್ರ   

ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ಶಂಕಿತ ಹಂತಕರಿಬ್ಬರನ್ನು ಹೋಲುವ ಮೂರು ರೇಖಾಚಿತ್ರ ಹಾಗೂ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿಗಳನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಶನಿವಾರ ಬಿಡುಗಡೆ ಮಾಡಿತು.

ನಗರದ ಸಿಐಡಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸ್‌ಐಟಿ ಮುಖ್ಯಸ್ಥ ಬಿ.ಕೆ.ಸಿಂಗ್‌, ‘ಆರೋಪಿಗಳ ಪತ್ತೆಗಾಗಿ 40 ದಿನ ತನಿಖೆ ನಡೆಸಿ ಹಲವು ಮಾಹಿತಿ ಕಲೆಹಾಕಿದ್ದೇವೆ. ಸಾಕ್ಷಿಗಳಿಗಾಗಿ ಹುಡುಕಾಟ ನಡೆಸಿದ್ದೇವೆ. ರೇಖಾಚಿತ್ರದಲ್ಲಿರುವ ಆರೋಪಿಗಳ ಬಗ್ಗೆ  ಮಾಹಿತಿ ಇದ್ದರೆ ಸಾರ್ವಜನಿಕರು ತಿಳಿಸಬೇಕು’ ಎಂದು ಕೋರಿದರು.

‘ಮೂರು ಚಿತ್ರಗಳ ಪೈಕಿ ಎರಡು ಚಿತ್ರಗಳು ಒಬ್ಬನೇ ಆರೋಪಿಯನ್ನೇ ಹೋಲುತ್ತವೆ. ಒಂದಕ್ಕೆ ಮೀಸೆ ಇದ್ದು, ಕುಂಕುಮ ಹಚ್ಚಿದ್ದಾನೆ. ಇನ್ನೊಂದಕ್ಕೆ  ಮೀಸೆ ಇಲ್ಲ. ಮೂರನೆಯದ್ದು ಮತ್ತೊಬ್ಬ ಆರೋಪಿಯ ರೇಖಾಚಿತ್ರ. ಈ ಮೂವರಲ್ಲಿ ಒಬ್ಬ ಗೌರಿ ಅವರ ಮೇಲೆ ಗುಂಡು ಹಾರಿಸಿರುವ ಅನುಮಾನವಿದೆ. ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯ ಹಾಗೂ ಸ್ಥಳೀಯ ವ್ಯಕ್ತಿಗಳು ನೀಡಿದ ಮಾಹಿತಿ ಆಧರಿಸಿ ಪರಿಣತ ಕಲಾವಿದರು ನಿರಂತರ 48 ಗಂಟೆಗಳವರೆಗೆ ಈ ರೇಖಾಚಿತ್ರ ಸಿದ್ಧಪಡಿಸಿದ್ದಾರೆ’ ಎಂದು ಅವರು ತಿಳಿಸಿದರು.

ADVERTISEMENT

‘ಹಂತಕರು 25ರಿಂದ 30 ವರ್ಷದೊಳಗಿನವರು ಎಂಬುದು ರೇಖಾಚಿತ್ರಗಳಿಂದ ಗೊತ್ತಾಗುತ್ತದೆ. ಒಬ್ಬಾತ ಕುಂಕುಮ ಹಚ್ಚಿದ ಬಗ್ಗೆ ಸ್ಥಳೀಯ ಮಹಿಳೆಯೊಬ್ಬರು ಮಾಹಿತಿ ನೀಡಿದ್ದಾರೆ’ ಎಂದರು.  

ಕೆಂಪು ಪಲ್ಸರ್ ಬೈಕ್‌ನಲ್ಲಿ ಓಡಾಟ:  ಗೌರಿ ಲಂಕೇಶ್‌ ಮನೆಯ ಸುತ್ತಮುತ್ತಲಿನ ಎರಡು ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಎಸ್‌ಐಟಿ ತಂಡ ಬಿಡುಗಡೆ ಮಾಡಿದ್ದು, ಹಂತಕನೊಬ್ಬ ಕೆಂಪು ಪಲ್ಸರ್‌ ಬೈಕ್‌ನಲ್ಲಿ ಓಡಾಡಿದ್ದು ಸೆರೆಯಾಗಿದೆ.

‘ಸೆ. 5ರಂದು ಸಂಜೆ 4 ಗಂಟೆ 6 ನಿಮಿಷದ ಅವಧಿಯಲ್ಲಿ ರಾಜರಾಜೇಶ್ವರಿ ನಗರದ ಉದ್ಯಾನದ ಎದುರಿನ ರಸ್ತೆಯಲ್ಲಿ ಆರೋಪಿಯು ಪಲ್ಸರ್‌ನಲ್ಲಿ ಹಾದುಹೋಗಿದ್ದಾನೆ. ಆತ ಹೋಗುವ ವೇಳೆಯಲ್ಲಿ ವ್ಯಕ್ತಿಯೊಬ್ಬರು ರಾಯಲ್‌ಎನ್‌ಫೀಲ್ಡ್‌ ಬೈಕ್‌ ಅನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿಕೊಂಡು ನಿಂತಿದ್ದಾರೆ. ಮಹಿಳೆಯೊಬ್ಬರು ಅದೇ ಮಾರ್ಗವಾಗಿ ನಡೆದುಕೊಂಡು ಹೋಗಿದ್ದಾರೆ. ಆ ವ್ಯಕ್ತಿ ಹಾಗೂ ಮಹಿಳೆಯನ್ನು ಸಂಪರ್ಕಿಸಿ ಮಾಹಿತಿ ಪಡೆದಿದ್ದೇವೆ’ ಎಂದು ಎಸ್‌ಐಟಿ ಅಧಿಕಾರಿಗಳು ತಿಳಿಸಿದರು.

‘ಹತ್ಯೆಗೂ ಮುನ್ನ ಹಂತಕರು, ಗೌರಿ ಅವರ ಮನೆಯ ಸುತ್ತ ಸಾಕಷ್ಟು ಬಾರಿ ಓಡಾಡಿದ್ದಾರೆ. ಪ್ರತಿ ಬಾರಿಯೂ ಹೆಲ್ಮೆಟ್‌ ಧರಿಸಿದ್ದರಿಂದ ಅವರ ಮುಖಚಹರೆ ಗುರುತು ಹಚ್ಚಲು ಸಾಧ್ಯವಾಗುತ್ತಿಲ್ಲ. ಇನ್ನು ಕೆಲ ದೃಶ್ಯಗಳು ಆರೋಪಿಗಳ ಬಗ್ಗೆ ಸುಳಿವು ನೀಡಿದ್ದು, ಅವುಗಳನ್ನು ಸದ್ಯಕ್ಕೆ ಬಹಿರಂಗಪಡಿಸಲು ಆಗುವುದಿಲ್ಲ‍’ ಎಂದು ಬಿ.ಕೆ.ಸಿಂಗ್‌ ಅವರು ಹೇಳಿದರು.

ಹಂತಕರ ಮಾಹಿತಿ ಇದ್ದರೆ ತಿಳಿಸಿ

‘ಶಂಕಿತ ಹಂತಕರ ರೇಖಾಚಿತ್ರ ಹೋಲುವ ಮತ್ತು ದೃಶ್ಯದಲ್ಲಿರುವ ಆರೋಪಿಗಳ ಬಗ್ಗೆ ಮಾಹಿತಿ ಇದ್ದರೆ ಮೊ. 94808-00202 ಅಥವಾ sit.glankesh@ksp.gov.inಗೆ ಮಾಹಿತಿ ನೀಡಬಹುದು. ಆರೋಪಿಗಳ ಬಗ್ಗೆ ಮಾಹಿತಿ ನೀಡುವವರ ವಿವರವನ್ನು ಗೋಪ್ಯವಾಗಿಡಲಾಗುವುದು. ಸರ್ಕಾರ ನಿಗದಿಪಡಿಸಿರುವ ಬಹುಮಾನವನ್ನೂ ನೀಡಲಾಗುವುದು’ ಎಂದು ಬಿ.ಕೆ.ಸಿಂಗ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.