ADVERTISEMENT

ಶನಿವಾರ ಮೊದಲ ಪಟ್ಟಿ ಬಿಡುಗಡೆ: ಜೋಶಿ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2014, 12:33 IST
Last Updated 3 ಮಾರ್ಚ್ 2014, 12:33 IST

ಬೆಂಗಳೂರು (ಪಿಟಿಐ): ಲೋಕಸಭಾ ಚುನಾವಣೆಗಾಗಿ ರಾಜ್ಯ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪಕ್ಷದ ರಾಷ್ಟ್ರೀಯ ಘಟಕದ ಅಧ್ಯಕ್ಷರು ಮಾರ್ಚ್‌ 8 ರಂದು ಪ್ರಕಟಿಸುವ ಸಾಧ್ಯತೆಗಳಿವೆ ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಪ್ರಹ್ಲಾದ್ ಜೋಶಿ ಸೋಮವಾರ ತಿಳಿಸಿದ್ದಾರೆ.

‘ಲೋಕಸಭಾ ಚುನಾವಣೆಯ ರಾಜ್ಯ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪಕ್ಷದ ಕೇಂದ್ರೀಯ ಚುನಾವಣಾ ನಿರ್ವಹಣೆ ಹಾಗೂ ಸಮನ್ವಯ ಸಮಿತಿಯು ದೆಹಲಿಯಲ್ಲಿ ಪ್ರಕಟಿಸುವ ಸಾಧ್ಯತೆಗಳಿವೆ’ ಎಂದು ಜೋಶಿ ಹೇಳಿದ್ದಾರೆ.

ರಾಜ್ಯ ಬಿಜೆಪಿ ಚುನಾವಣಾ ಮಂಡಳಿ ಹಾಗೂ ಸಮನ್ವಯ ಸಮಿತಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿರುವ ಲೋಕಸಭೆಯ ಎಲ್ಲಾ 28 ಕ್ಷೇತ್ರಗಳಿಗೂ ರಾಜ್ಯ ಘಟಕ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ ಎಂದರು.

ADVERTISEMENT

ಕುತೂಹಲ ಕೆರಳಿಸಿರುವ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ಬಗ್ಗೆಯೂ ‘ಪಕ್ಷ ಉತ್ತರ ಕಂಡುಕೊಂಡಿದೆ’ ಎಂದು ಜೋಶಿ ಹೇಳಿದರಾದರೂ ಹೆಚ್ಚಿನ ವಿವರ ನೀಡಲಿಲ್ಲ.

ಬೆಂಗಳೂರು ಉತ್ತರ ಕ್ಷೇತ್ರದಿಂದ  ಸ್ಪರ್ಧಿಸಲು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಆರ್‌.ಅಶೋಕ್‌ ಉತ್ಸುಕವಾಗಿದ್ದು, ಈ ಸಂಬಂಧ ಪರಸ್ಪರರು ‘ಬಹಿರಂಗ’ವಾಗಿಯೇ ಆರೋಪ–ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.