ADVERTISEMENT

ಶಾಮನೂರು ಜತೆ ಜೆಡಿಎಸ್ ಮುಖಂಡರ ರಹಸ್ಯ ಸಭೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2012, 19:30 IST
Last Updated 15 ಫೆಬ್ರುವರಿ 2012, 19:30 IST

ದಾವಣಗೆರೆ: ಕಾಂಗ್ರೆಸ್ ಮುಖಂಡ ಶಾಮನೂರು ಶಿವಶಂಕರಪ್ಪ ಮತ್ತು ಅವರ ಪುತ್ರ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಲಿದ್ದಾರೆಯೇ?
ಜಿಲ್ಲೆಯಲ್ಲಿ ಎರಡು ದಿನಗಳಿಂದ ನಡೆದ ಬೆಳವಣಿಗೆಗಳು `ಹೌದು~ ಎಂಬ ಉತ್ತರಕ್ಕೆ ಸಾಕಷ್ಟು ಪುರಾವೆಯನ್ನು ಒದಗಿಸುತ್ತವೆ.

ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ `ಜನಪರ ಜನತಾ ಜಾಥಾ~ ಕಾರ್ಯಕ್ರಮಕ್ಕಾಗಿ ಆಗಮಿಸಿದ್ದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ, ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ, ಶಿವಶಂಕರಪ್ಪ ಅವರ ಮನೆಗೆ ಭೇಟಿ ನೀಡಿ ದೀರ್ಘ ಸಮಯ ಮಾತುಕತೆ ನಡೆಸಿರುವುದು ಈ ಗುಮಾನಿಗೆ ಕಾರಣವಾಗಿದೆ.

ಫೆ. 14ರಂದು ರಾತ್ರಿ ನಗರಕ್ಕೆ ಬಂದ ಕುಮಾರಸ್ವಾಮಿ, ಸಮಾವೇಶದ ಮಾಹಿತಿ ಪಡೆದ ನಂತರ 11.30ರ ಸುಮಾರಿಗೆ ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ್ ಹಾಗೂ ಇಬ್ಬರು ಸ್ಥಳೀಯ ಮುಖಂಡರೊಂದಿಗೆ ಶಾಮನೂರು ಮನೆಗೆ ಭೇಟಿ ನೀಡಿ, ಎಸ್.ಎಸ್. ಮಲ್ಲಿಕಾರ್ಜುನ್ ಅವರ ಜತೆ ರಾತ್ರಿಯಿಡೀ ಚರ್ಚೆ ನಡೆಸಿ, ಬೆಳಗಿನ ಜಾವ 5 ಗಂಟೆಯ ಸುಮಾರಿಗೆ ಮನೆಯಿಂದ ಹೊರಬಂದಿದ್ದಾರೆ.

ಕುಮಾರಸ್ವಾಮಿ ಅವರ ಈ ಭೇಟಿಗೆ ಇಂಬುಕೊಡುವಂತೆ ಸಮಾವೇಶದ ನಂತರ ಶಾಮನೂರು ಮನೆಗೆ ಭೇಟಿ ನೀಡಿದ ದೇವೇಗೌಡರು ಸಂಜೆವರೆಗೂ ಮಾತುಕತೆ ನಡೆಸಿದ್ದಾರೆ. ಈ ಎಲ್ಲ ಬೆಳವಣಿಗೆಗಳು ಶಿವಶಂಕರಪ್ಪ ಹಾಗೂ ಅವರ ಪುತ್ರ ಜೆಡಿಎಸ್ ಸೇರುವ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.