ADVERTISEMENT

ಶಾಲೆ ಆರಂಭಕ್ಕೂ ಮುನ್ನ ಪಠ್ಯಪುಸ್ತಕ ಲಭ್ಯ

ಕರ್ನಾಟಕ ಪಠ್ಯಪುಸ್ತಕ ಸೊಸೈಟಿಗೆ ಮುದ್ರಣದ ಜವಾಬ್ದಾರಿ: ಶೇಕಡ 85ರಷ್ಟು ಮುದ್ರಣ ಪೂರ್ಣ

​ಪ್ರಜಾವಾಣಿ ವಾರ್ತೆ
Published 18 ಮೇ 2018, 19:30 IST
Last Updated 18 ಮೇ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಶಾಲೆಗಳು ಆರಂಭವಾಗಿ ತಿಂಗಳು ಕಳೆದರೂ ಪಠ್ಯಪುಸ್ತಕಗಳು ದೊರೆಯದ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಟೀಕೆಗಳನ್ನು ಎದುರಿಸುತ್ತಿತ್ತು. ಈ ಬಾರಿ ಜೂನ್‌ 1ರೊಳಗೆ ಮಕ್ಕಳಿಗೆ ಪಠ್ಯ ಪುಸ್ತಕಗಳು ದೊರೆಯುವಂತೆ ಇಲಾಖೆ ಕ್ರಮಕೈಗೊಂಡಿದೆ.

ಪಠ್ಯಪುಸ್ತಕ ಮುದ್ರಣದ ಜವಾಬ್ದಾರಿ ವಹಿಸಿಕೊಂಡಿರುವ ಕರ್ನಾಟಕ ಪಠ್ಯಪುಸ್ತಕ ಸೊಸೈಟಿ, ಶಾಲೆ ಪ್ರಾರಂಭವಾಗುವ ಮೊದಲೇ ಪಠ್ಯಪುಸ್ತಕಗಳನ್ನು ತಲುಪಿಸುವ ವ್ಯವಸ್ಥೆ ಮಾಡಿದೆ. ಇದುವರೆಗೆ, ನಾನಾ ಕಾರಣಗಳಿಂದ ಪಠ್ಯಪುಸ್ತಕಗಳು ಶಾಲೆಗಳಿಗೆ ತಲುಪುವುದು ತಡವಾಗುತ್ತಿತ್ತು.

‘ಈ ಬಾರಿ ಮುಂಚಿತವಾಗಿ ಮುದ್ರಣಾಲಯಕ್ಕೆ ಪಠ್ಯವನ್ನು ನೀಡಲಾಗಿದ್ದು, ಶೇಕಡ 85ರಷ್ಟು ಮುದ್ರಣ ಪೂರ್ಣಗೊಂಡಿದೆ. ಮೊದಲೇ  ತಪ್ಪುಗಳನ್ನು ಗುರುತಿಸಿ ಸರಿಪಡಿಸಲಾಗಿದೆ. ಕನ್ನಡ, ಇಂಗ್ಲಿಷ್‌, ಹಿಂದಿ, ತಮಿಳು, ತೆಲುಗು, ಮರಾಠಿ, ಉರ್ದು ಭಾಷಾ ಹಾಗೂ ವಿಷಯವಾರು ಪುಸ್ತಕಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳ (ಬಿಇಒ) ಕಚೇರಿಗಳಿಗೆ ರವಾನಿಸಲಾಗಿದೆ’ ಎಂದು ಸರ್ವಶಿಕ್ಷಣ ಅಭಿಯಾನದ ಯೋಜನಾ ನಿರ್ದೇಶಕ ಡಾ.ಎಂ.ಟಿ.ರೇಜು ತಿಳಿಸಿದರು.

ADVERTISEMENT

‘ಆರು ವಿಷಯಗಳ ಪಠ್ಯಗಳು ನಮ್ಮ ಕಚೇರಿ ತಲುಪಿದ್ದು, ಎರಡು– ಮೂರು ದಿನಗಳಿಂದ ಶಾಲೆಗಳಿಗೆ ವಿತರಿಸುತ್ತಿದ್ದೇವೆ. ತಪ್ಪುಗಳ ಬಗ್ಗೆ ಇಲ್ಲಿಯವರೆಗೂ ಯಾವುದೇ ದೂರು ಬಂದಿಲ್ಲ. ನಮ್ಮ ಕ್ಷೇತ್ರದ ಎಲ್ಲಾ ಶಾಲೆಗಳಿಗೂ ಶೀಘ್ರ ಪುಸ್ತಕಗಳನ್ನು ವಿತರಿಸುತ್ತೇವೆ’  ಎಂದು ಬಿಇಒ ರಮೇಶ್‌ ಮಾಹಿತಿ ನೀಡಿದರು.

ಕಳೆದ ಬಾರಿ ಶಾಲೆ ಪ್ರಾರಂಭವಾಗಿ ಎರಡು ತಿಂಗಳು ಕಳೆದಿದ್ದರೂ ಕೆಲವು ಜಿಲ್ಲೆಗಳಿಗೆ ಪಠ್ಯಪುಸ್ತಕಗಳು ಸರಬರಾಜು ಆಗಿರಲಿಲ್ಲ. ಸಾಕಷ್ಟು ತಪ್ಪುಗಳು ಇದ್ದುದ್ದರಿಂದ ಮರುಮುದ್ರಣ ಮಾಡಬೇಕಾಯಿತು. ಮುದ್ರಣಕ್ಕೆ ಪೇಪರ್‌ ಕೊರತೆ ಉಂಟಾಗಿದ್ದರಿಂದ ವಿತರಣೆ ತಡವಾಗಿತ್ತು.
*
ಆನ್‌ಲೈನ್‌ ಹಣಪಾವತಿ

‘ಖಾಸಗಿ ಶಾಲೆಗಳು ಪಠ್ಯ ಪುಸ್ತಕ ಖರೀದಿಸಲು ಬ್ಯಾಂಕ್‌ಗೆ ಹೋಗಿ ಹಣಪಾವತಿ ಮಾಡಬೇಕಿತ್ತು. ಇದು ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ ಈ ಬಾರಿಯಿಂದ ಆನ್‌ಲೈನ್‌ ಹಣ ಪಾವತಿ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಬಹಳಷ್ಟು ಪ್ರಕ್ರಿಯೆಯನ್ನು ಆನ್‌ಲೈನ್‌ ವ್ಯವಸ್ಥೆ ಮಾಡಿರುವುದರಿಂದ ಕೆಲಸಗಳು ವೇಗಗೊಂಡಿವೆ’ ಎಂದು ರೇಜು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.