ADVERTISEMENT

ಶಾಸಕ ಓಲೇಕಾರ ವಿರುದ್ಧ ದೂರು

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2012, 19:30 IST
Last Updated 9 ಅಕ್ಟೋಬರ್ 2012, 19:30 IST

ಹಾವೇರಿ: ರಾಜ್ಯ ಅನುಸೂಚಿತ ಪಂಗಡ ಹಾಗೂ ಬುಡಕಟ್ಟು ಆಯೋಗದ ಅಧ್ಯಕ್ಷ ಹಾಗೂ ಹಾವೇರಿ ಶಾಸಕ ನೆಹರೂ ಓಲೇಕಾರ ಸೇರಿದಂತೆ ಏಳು ಜನರ ವಿರುದ್ಧ ಸ್ವಜನ ಪಕ್ಷಪಾತ, ಖೊಟ್ಟಿ ಪ್ರಮಾಣ ಪತ್ರ ಹಾಗೂ ಲೋಕಾಯುಕ್ತಕ್ಕೆ ಸುಳ್ಳು ಆದಾಯ ಪ್ರಮಾಣಪತ್ರ ಸಲ್ಲಿಕೆ ಆರೋಪ ಹೊರಿಸಿ ನಗರದ ಗುತ್ತಿಗೆದಾರರೊಬ್ಬರು ಜಿಲ್ಲಾ ವಿಶೇಷ ಲೋಕಾಯುಕ್ತ ನ್ಯಾಯಾಲಯದಲ್ಲಿ ಮಂಗಳವಾರ ದೂರು ದಾಖಲಿಸಿದ್ದಾರೆ.

ಸ್ಥಳೀಯ ಗುತ್ತಿಗೆದಾರ ಶಶಿಧರ ಹಳ್ಳಿಕೇರಿ ನೀಡಿರುವ ದೂರನ್ನು ಜಿಲ್ಲಾ ನ್ಯಾಯಾಧೀಶರಾದ ಎಚ್.ಪಿ. ಸಂದೇಶ ಸ್ವೀಕರಿಸಿದ್ದು, ತೀರ್ಪನ್ನು ಇದೇ 17ಕ್ಕೆ ಕಾಯ್ದಿರಿಸಿ ಆದೇಶ ಹೊರಡಿಸಿದ್ದಾರೆ.
ಶಶಿಧರ ಹಳ್ಳಿಕೇರಿ ನ್ಯಾಯಾಲಯಕ್ಕೆ ಸಲ್ಲಿಸಿರುವ ದೂರಿನಲ್ಲಿ ನೆಹರೂ ಓಲೇಕಾರ ಪ್ರಥಮ ಆರೋಪಿಯಾಗಿದ್ದಾರೆ.

ಅವರ ಮಕ್ಕಳಾದ ಮಂಜುನಾಥ ಮತ್ತು ದೇವರಾಜ, ನಗರಸಭೆ ಆಯುಕ್ತ ಎಚ್.ಕೆ.ರುದ್ರಪ್ಪ, ಎಂಜಿನಿಯರುಗಳಾದ ಮಂಜುನಾಥ ಹಾಗೂ ಬಿ.ಕೆ.ಕಲ್ಲಪ್ಪ, ದ್ವಿತೀಯ ದರ್ಜೆ ಸಹಾಯ ಶಿವಕುಮಾರ ಕಮದೋಡ ಅವರು ಉಳಿದ ಆರೋಪಿಗಳಾಗಿದ್ದಾರೆ.

 ಮಗ ಮಂಜುನಾಥ ಅವರನ್ನು ಮೊದಲ ದರ್ಜೆ ಗುತ್ತಿಗೆದಾರರನ್ನು ಮಾಡಲು ನಗರಸಭೆಯಿಂದ 2.15 ಕೋಟಿ ರೂಪಾಯಿ ಹಾಗೂ 1.50 ಕೋಟಿ ರೂಪಾಯಿ ಕಾಮಗಾರಿ ಮಾಡಿದ ಬಗ್ಗೆ ಖೊಟ್ಟಿ ಪ್ರಮಾಣ ಪತ್ರ ಪಡೆದಿದ್ದಾರೆ ಹಾಗೂ ಲೋಕಾಯುಕ್ತರಿಗೆ ನೀಡಿದ ಆದಾಯ ಪ್ರಮಾಣ ಪತ್ರದಲ್ಲಿ ಕೃಷಿ ಆದಾಯವನ್ನು ಮಾತ್ರ ನೀಡಿದ್ದು, ಮಕ್ಕಳ ಆದಾಯವನ್ನು ಮರೆ ಮಾಚಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಅಲ್ಲದೇ, ಈ ಕುರಿತು ಲೋಕಾಯುಕ್ತ ತನಿಖೆಗೆ ಆದೇಶಿಸಬೇಕೆಂದು ದೂರಿನಲ್ಲಿ ಕೋರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.