ADVERTISEMENT

ಶಾಸಕ ಸೋಮಶೇಖರ ರೆಡ್ಡಿಗೆ ಜಾಮೀನು ರಹಿತ ವಾರೆಂಟ್

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2012, 19:30 IST
Last Updated 19 ಅಕ್ಟೋಬರ್ 2012, 19:30 IST

ಬಳ್ಳಾರಿ: ಅರಣ್ಯ ಇಲಾಖೆಯ ಹಿರಿಯ ಅಧಿಕಾರಿ ಯು.ವಿ. ಸಿಂಗ್ ಅವರಿಗೆ ಪ್ರಾಣ ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿರುವ ಶಾಸಕ ಜಿ.ಸೋಮಶೇಖರ ರೆಡ್ಡಿ ಮತ್ತು ಬಳ್ಳಾರಿ ಮಹಾನಗರ ಪಾಲಿಕೆ ಸದಸ್ಯ ದಿವಾಕರ್ ಅವರಿಗೆ ಸಂಡೂರು ನ್ಯಾಯಾಲಯವು ಶುಕ್ರವಾರ ವಾರೆಂಟ್ ಜಾರಿ ಮಾಡಿದೆ.

ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ನವೆಂಬರ್ 13ರಂದು ಖುದ್ದಾಗಿ ಹಾಜರಾಗುವಂತೆ ಸೂಚಿಸಿರುವ ನ್ಯಾಯಾಲಯವು ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ ಎಂದು ನ್ಯಾಯಾಲಯದ ಮೂಲಗಳು ತಿಳಿಸಿವೆ.

ಅಕ್ರಮ ಗಣಿಗಾರಿಕೆ ಕುರಿತು ಲೋಕಾಯುಕ್ತ ನಡೆಸುತ್ತಿದ್ದ ತನಿಖೆಯ ಅಂಗವಾಗಿ 2009ರ ಸೆ. 12ರಂದು ಜಿಲ್ಲೆಯ ಸಂಡೂರು ತಾಲ್ಲೂಕಿನ ರಾಮಗಢ ಅರಣ್ಯ ಪ್ರದೇಶದಲ್ಲಿನ ಗಣಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದ ಸಂದರ್ಭದಲ್ಲಿ ಸೋಮಶೇಖರ ರೆಡ್ಡಿ ಹಾಗೂ ದಿವಾಕರ್ ಅವರು ಯು.ವಿ. ಸಿಂಗ್ ಅವರಿಗೆ ಬೆದರಿಕೆ ಒಡ್ಡಿದ ಆರೋಪ ಎದುರಿಸುತ್ತಿದ್ದಾರೆ.

ಪ್ರಕರಣದ ತನಿಖೆ ನಡೆಸಿರುವ ಸಂಡೂರು ಪೊಲೀಸರು ಅಕ್ಟೋಬರ್ 3ರಂದು 14 ಜನ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.