ADVERTISEMENT

ಶಿಕ್ಷೆಗೆ ಗುರಿಯಾದ ಮಲ್ಲಿಕಾರ್ಜುನ್ ವಜಾ

​ಪ್ರಜಾವಾಣಿ ವಾರ್ತೆ
Published 13 ಜೂನ್ 2013, 19:29 IST
Last Updated 13 ಜೂನ್ 2013, 19:29 IST

ಬೆಂಗಳೂರು: ಲಂಚ ಪ್ರಕರಣದಲ್ಲಿ ಲೋಕಾಯುಕ್ತ ವಿಶೇಷ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿರುವ ಕಾನೂನು ಮಾಪನಶಾಸ್ತ್ರ ಇಲಾಖೆಯ ಉಪ ನಿಯಂತ್ರಕ ಸಿ.ಎಂ.ಮಲ್ಲಿಕಾರ್ಜುನ ಅವರನ್ನು ಸೇವೆಯಿಂದ ವಜಾ ಮಾಡಲು ಗುರುವಾರ ನಡೆದ ಸಂಪುಟ ಸಭೆ ತೀರ್ಮಾನಿಸಿದೆ.

ಮಲ್ಲಿಕಾರ್ಜುನ ಅವರು 2005ರಲ್ಲಿ ಇಲಾಖೆಯ ಉಪ ನಿಯಂತ್ರಕರಾಗಿ ಕರ್ತವ್ಯದಲ್ಲಿದ್ದರು. ಆ ಸಂದರ್ಭದಲ್ಲಿ, ಅವರು 50 ಸಾವಿರ ರೂಪಾಯಿ ಲಂಚ ನೀಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಲೋಕಾಯುಕ್ತದಲ್ಲಿ ದೂರು ದಾಖಲಾಯಿತು. ಹಣ ಪಡೆಯುತ್ತಿದ್ದಾಗಲೇ ಮಲ್ಲಿಕಾರ್ಜುನ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಲೋಕಾಯುಕ್ತ ವಿಶೇಷ ನ್ಯಾಯಾಲಯ, ಮಲ್ಲಿಕಾರ್ಜುನ ಅವರಿಗೆ ಒಂದೂವರೆ ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ 2012ರ ಜೂನ್ 30ರಂದು ಆದೇಶ ಹೊರಡಿಸಿತ್ತು.

ಲೋಕಾಯುಕ್ತ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮಲ್ಲಿಕಾರ್ಜುನ ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಮಲ್ಲಿಕಾರ್ಜುನ ಅವರಿಗೆ ಶಿಕ್ಷೆ ವಿಧಿಸದಂತೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಆದರೆ, ಲೋಕಾಯುಕ್ತ ವಿಶೇಷ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಿರಲಿಲ್ಲ. ತಡೆಯಾಜ್ಞೆ ಕಾರಣ ನೀಡಿ ಆರೋಪಿ ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿದ್ದ ಸರ್ಕಾರ, ಮಲ್ಲಿಕಾರ್ಜುನ ಅವರನ್ನು ಸೇವೆಯಲ್ಲಿ ಮುಂದುವರಿಸಿತ್ತು.

ಸರ್ಕಾರದ ಕ್ರಮ ಪ್ರಶ್ನಿಸಿ ಬೆಂಗಳೂರಿನ ಆರ್.ಎಸ್. ಸುದರ್ಶನ್ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಮುಖ್ಯ ನ್ಯಾ. ಡಿ.ಎಚ್. ವಘೇಲಾ ಮತ್ತು ನ್ಯಾ. ಬಿ.ವಿ. ನಾಗರತ್ನ ಅವರಿದ್ಧ ವಿಭಾಗೀಯ ಪೀಠ, ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಈ ಕಾರಣದಿಂದಾಗಿಯೇ ಮಲ್ಲಿಕಾರ್ಜುನ ಅವರನ್ನು ಸೇವೆಯಿಂದ ವಜಾ ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ.

ಸೇವೆಯಲ್ಲಿ ಮುಂದುವರಿಕೆ: ಕಳೆದ ಮೇ 30ರಂದು ಸೇವೆಯಿಂದ ನಿವೃತ್ತರಾಗಿದ್ದ ಪೊಲೀಸ್ ಅಧಿಕಾರಿ ಯು.ಪಿ.ಶಿವರಾಮ ರೆಡ್ಡಿ ಅವರನ್ನು ಲೋಕಾಯುಕ್ತದ ಬೆಂಗಳೂರು ನಗರ ಎಸ್‌ಪಿ ಹುದ್ದೆಯಲ್ಲಿ 3 ತಿಂಗಳ ಅವಧಿಗೆ ಗುತ್ತಿಗೆ ಆಧಾರದಲ್ಲಿ ಮುಂದುವರಿಸುವ ತೀರ್ಮಾನವನ್ನೂ ಸಂಪುಟ ಸಭೆ ಕೈಗೊಂಡಿದೆ ಎಂದು ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.