ಸಕಲೇಶಪುರ: ಶಿರಾಡಿ ಘಾಟ್‌ನಲ್ಲಿ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ರೂ 21 ಕೋಟಿ ಬಿಡುಗಡೆ ಮಾಡಿದೆ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಹೇಳಿದರು.
ಪುತ್ತೂರಿನಿಂದ ಬೆಂಗಳೂರಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ತೆರಳುತ್ತಿದ್ದ ಅವರು ಶಿರಾಡಿ ಘಾಟ್‌ನ ಡಬಲ್ ಟರ್ನ್ ಬಳಿ ವಾಹನದಿಂದ ಇಳಿದು ರಸ್ತೆ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಈ ಘಾಟ್‌ನಲ್ಲಿ ಕಡಿದಾದ ತಿರುವುಗಳ ಅಭಿವೃದ್ಧಿ ಹಾಗೂ ಮರು ಡಾಂಬರೀಕರಣಕ್ಕೆ ಈಗಾಗಲೇ ರೂ 21 ಕೋಟಿ ಬಿಡುಗಡೆ ಮಾಡಲಾಗಿದೆ. ಶೀಘ್ರದಲ್ಲಿ ಟೆಂಡರ್ ಆಹ್ವಾನಿಸಿ, ಮಳೆ ಕಡಿಮೆಯಾದ ತಕ್ಷಣವೇ ಕಾಮಗಾರಿ ಆರಂಭಿಸಲಾಗುವುದು. ಮುಂದಿನ ಫೆಬ್ರುವರಿಯೊಳಗೆ ಡಾಂಬರೀಕರಣ, ತಿರುವುಗಳ ಅಭಿವೃದ್ಧಿ ಮುಗಿಸುವಂತೆ ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ ಎಂದು ತಿಳಿಸಿದರು.
ತುರ್ತು ಕ್ರಮಕ್ಕೆ ಆದೇಶ: ಶಿರಾಡಿ ಘಾಟ್‌ನಲ್ಲಿ ಮಳೆಗಾಲದಲ್ಲಿ ಮಳೆ ನೀರು ರಸ್ತೆಯಲ್ಲಿ ಸರಾಗವಾಗಿ ಹರಿಯಲು ವ್ಯವಸ್ಥೆ ಇಲ್ಲ. ಹೀಗಾಗಿ ಕಂದಕ ತುಂಬಿದ ಈ ರಸ್ತೆಯಲ್ಲಿ ವಾಹನ ಚಾಲನೆ ಹರಸಾಹಸದ ಕೆಲಸವಾಗಿದೆ. ಈ ಬಾರಿ ಈ ಸಮಸ್ಯೆ ಆಗದಂತೆ ತುರ್ತು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ರಸ್ತೆಬದಿಯ ಚರಂಡಿಗಳನ್ನು ಸ್ವಚ್ಛಗೊಳಿಸಿ, ಮಳೆ ನೀರು ಚರಂಡಿ ಮೂಲಕ ಹರಿಯುವಂತೆ ತುರ್ತಾಗಿ ಕ್ರಮ ಕೈಗೊಳ್ಳಲು ಸ್ಥಳದಲ್ಲಿದ್ದ ರಾಷ್ಟ್ರೀಯ ಹೆದ್ದಾರಿ ಎಂಜಿನಿಯರುಗಳಿಗೆ ಸೂಚಿಸಿದರು.
ಸುರಂಗ ಮಾರ್ಗ ನಿರ್ಮಾಣ: ಸಕಲೇಶಪುರದಿಂದ ಗುಂಡ್ಯಾ ನಡುವೆ ರೂ . 3200 ಕೋಟಿ ವೆಚ್ಚದಲ್ಲಿ 22 ಕಿ.ಮೀ. ಸುರಂಗ ಮಾರ್ಗ ನಿರ್ಮಿಸಲಾಗುವುದು. ಈ ಸಂಬಂಧ ರಾಜ್ಯ ಸರ್ಕಾರ ಹಾಗೂ ಜಪಾನ್‌ನ ಜೈಕಾ ಕಂಪೆನಿ ನಡುವೆ ಎರಡು ಸುತ್ತಿನ ಮಾತುಕತೆ ನಡೆದಿದೆ ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಪಶ್ಚಿಮಘಟ್ಟದ ರಕ್ಷಿತ ಅರಣ್ಯದ ಒಳಗೆ ಸುರಂಗ ಮಾರ್ಗ ನಿರ್ಮಾಣದ ಪ್ರದೇಶ ಹಾಗೂ ನಿರ್ಗಮನ ಪ್ರದೇಶಕ್ಕೆ ಬಳಸಿಕೊಳ್ಳುವ ಅರಣ್ಯ ಪ್ರದೇಶದ ಎರಡರಷ್ಟು ಭೂಮಿಯನ್ನು ರಾಜ್ಯ ಸರ್ಕಾರ ಬೇರೆ ಕಡೆ ನೀಡಲಿದೆ. ಆದ್ದರಿಂದ ಈ ಯೋಜನೆಗೆ ಕೇಂದ್ರ ಪರಿಸರ ಸಚಿವಾಲಯ ಅನುಮತಿ ನೀಡಲಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.