ADVERTISEMENT

ಶಿರಾದಲ್ಲಿ ಕೋಮು ಗಲಭೆ: ನಿಷೇಧಾಜ್ಞೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2013, 20:13 IST
Last Updated 30 ಸೆಪ್ಟೆಂಬರ್ 2013, 20:13 IST
ಶಿರಾದಲ್ಲಿ ಭಾನುವಾರ ಮಧ್ಯರಾತ್ರಿ ನಡೆದ ಕೋಮು ಗಲಭೆ­ಯಲ್ಲಿ  ಬೆಂಕಿಗೆ ಸುಟ್ಟುಕರಕಲಾದ ವಾಹನ
ಶಿರಾದಲ್ಲಿ ಭಾನುವಾರ ಮಧ್ಯರಾತ್ರಿ ನಡೆದ ಕೋಮು ಗಲಭೆ­ಯಲ್ಲಿ ಬೆಂಕಿಗೆ ಸುಟ್ಟುಕರಕಲಾದ ವಾಹನ   

ಶಿರಾ: ನಗರದಲ್ಲಿ ಭಾನುವಾರ ತಡರಾತ್ರಿ ನಡೆದ ಕೋಮು ಗಲಭೆಯಲ್ಲಿ 10ಕ್ಕೂ ಹೆಚ್ಚು ವಾಹನ ಹಾಗೂ ನಾಲ್ಕೈದು ಮನೆಗಳು ಜಖಂಗೊಂಡಿವೆ. ಐವರು ಗಾಯಗೊಂಡಿದ್ದಾರೆ. ಸೋಮವಾರ ರಾತ್ರಿ ಬುಕ್ಕಾಪಟ್ಟಣ ವೃತ್ತದಲ್ಲಿ ಬೀಡಾ ಅಂಗಡಿಗೆ ಬೆಂಕಿ ಹಚ್ಚಲಾಗಿದೆ.

ನಗರ ವ್ಯಾಪ್ತಿಯಲ್ಲಿ ಸೋಮವಾರ ಬೆಳಿಗ್ಗೆಯಿಂದಲೇ 144ರ ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ನಗರದ ಪ್ರವಾಸಿ ಮಂದಿರ ವೃತ್ತದ ಬಳಿ ಒಂದು ಕೋಮಿನವರು ನಿರ್ಮಿಸಿರುವ ಮಳಿಗೆಗಳು ಅಕ್ರಮವಾಗಿದ್ದು, ಅವುಗಳ ಬಾಗಿಲು ತೆರೆಯಕೂಡದು ಎಂದು ಮತ್ತೊಂದು ಕೋಮಿನ ಸಂಘಟನೆಗಳು ಕೆಲ ದಿನಗಳಿಂದ ನಡೆಸುತ್ತಿದ್ದ ಧರಣಿ-– ಪ್ರತಿಭಟನೆಗಳೇ ಕೋಮು ದಳ್ಳುರಿಗೆ ಮೂಲ ಕಾರಣ ಎನ್ನಲಾಗಿದೆ.

ನಗರದ ಸೊಪ್ಪಿನಹಟ್ಟಿ ಹಾಗೂ ಕಚೇರಿ ಮೊಹಲ್ಲಾ ಪ್ರದೇಶದಲ್ಲಿ ಗಲಭೆ ನಡೆದಿದ್ದು, ಸೋಮವಾರವೂ ಪರಿಸ್ಥಿತಿ ಉದ್ವಿಗ್ನತೆಯಿಂದ ಕೂಡಿತ್ತು. ಮೂರು ಬಸ್, ಎರಡು ಕಾರು, ಒಂದು ಆಟೊ ಹಾಗೂ 4 ದ್ವಿಚಕ್ರ ವಾಹನ ಜಖಂ­ಗೊಂಡಿವೆ. ಒಂದು ಪಾನಿಪೂರಿ ತಳ್ಳುವ ಗಾಡಿ ಹಾಳಾಗಿದೆ. ಐದಾರು ಮನೆಗಳ ಕಿಟಕಿ ಗಾಜು ಪುಡಿ­ಯಾಗಿದ್ದು, ಮನೆಯೊಂದಕ್ಕೆ ಸೀಮೆ­ಎಣ್ಣೆ ಸುರಿದು ಬೆಂಕಿ ಹಚ್ಚುವ ಪ್ರಯತ್ನ ನಡೆದಿದೆ.

ಭಾನುವಾರ ರಾತ್ರಿ ಸುಮಾರು 8.30ಕ್ಕೆ ಕ್ಷುಲ್ಲಕ ಕಾರಣಕ್ಕೆ ಕೋಟೆ ಪ್ರದೇಶದಲ್ಲಿ ಕೆಲವರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ವಿವಿಧ ರೀತಿಯ ವದಂತಿಗಳು ಹಬ್ಬಿ ಮಧ್ಯರಾತ್ರಿ ಬೆಂಕಿ, ಮಚ್ಚು, ಲಾಂಗ್, ದೊಣ್ಣೆ, ಕಲ್ಲು ಇತರ ಮಾರಕಾಸ್ತ್ರಬಳಸಿ ಆಸ್ತಿಗೆ ಹಾನಿ ಮಾಡಲಾಯಿತು.

ಎರಡೂ ಕೋಮಿನ ಜನರ ಆಸ್ತಿಪಾಸ್ತಿಗಳಿಗೆ ಹಾನಿಯಾಗಿದೆ. ಎರಡು ಕಡೆಯವರು ಸೇರಿ ಐದಾರು ಜನ ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ 30ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 300  ಪೊಲೀಸರನ್ನು ನಿಯೋಜಿಸಲಾಗಿದ್ದು, ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಪೊಲಿಸ್‌ ವರಿಷ್ಟಾಧಿಕಾರಿ ರಮಣ್‌ಗುಪ್ತಾ ‘ಪ್ರಜಾವಾಣಿ’ಗೆ ತಿಳಿಸಿದರು. 3 ಕೆಎಸ್‌ಆರ್‌ಪಿ ತುಕಡಿ, 4 ಡಿಎಆರ್‌ ವ್ಯಾನ್‌, ಮೂವರು ಡಿವೈಎಸ್ಪಿ, 8 ಮಂದಿ ಇನ್‌ಸೆ್ಪೆಕ್ಟರ್‌ , 10 ಸಬ್‌ ಇನ್‌ಸೆ್ಪೆಕ್ಟರ್‌, 12 ಎಎಸ್‌ಐ ಸ್ಥಳದಲ್ಲಿದ್ದಾರೆಂದು ಹೇಳಿದರು.

ಪೊಲೀಸ್ ಭದ್ರತೆ ಹೆಚ್ಚಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ. ಭಾನುವಾರ ರಾತ್ರಿ ಗಲಭೆ ನಡೆಯಬಹುದು ಎಂಬ ಸುಳಿವು ದೊರೆತರೂ ಪೊಲೀಸರು ನಿರ್ಲಕ್ಷ್ಯ ವಹಿಸಿದ ಕಾರಣ ಅದು ತೀವ್ರ ಸ್ವರೂಪ ಪಡೆಯಿತು ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

ಗಲಭೆ ಪೀಡಿತ ಪ್ರದೇಶಕ್ಕೆ ಐಜಿಪಿ ರವೀಂದ್ರನಾಥ್ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಮಣ­ಗುಪ್ತ ಭೇಟಿ ನೀಡಿ ಗಾಯಾಳು ಹಾಗೂ ಆಸ್ತಿಪಾಸ್ತಿ ಹಾನಿಗೀಡಾದವರಿಂದ ಮಾಹಿತಿ ಪಡೆದರು. ಈ ವೇಳೆ  ತನ್ನ ತಲೆಗೆ ದೊಣ್ಣೆಯಿಂದ ಹೊಡೆದಿದ್ದಾಗಿ ಗಾಯಾಳುಯೊಬ್ಬ ಹೇಳಿದರೆ, ಮತ್ತೊಬ್ಬ ಮಹಿಳೆ ತಮ್ಮ ಮನೆಯ ಒಳಗಡೆ ನಿಲ್ಲಿಸಿದ್ದ ಸ್ಕೂಟಿಯನ್ನು ಒತ್ತಾಯದಿಂದ ಹೊರಗೆ ತರಿಸಿ ಚಚ್ಚಿ ಹಾಕಿದರು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.