ADVERTISEMENT

ಶಿವಕುಮಾರ್‌, ರೋಷನ್‌ ಬೇಗ್‌ಗೆ ಮಂತ್ರಿ ಸ್ಥಾನ: ಬಿಜೆಪಿ ವಿರೋಧ

​ಪ್ರಜಾವಾಣಿ ವಾರ್ತೆ
Published 1 ಜನವರಿ 2014, 19:30 IST
Last Updated 1 ಜನವರಿ 2014, 19:30 IST

ಹುಬ್ಬಳ್ಳಿ: ‘ಡಿ,ಕೆ.ಶಿವಕುಮಾರ್ ಹಾಗೂ ರೋಷನ್‌ ಬೇಗ್‌ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಮೂಲಕ ಮುಖ್ಯ­ಮಂತ್ರಿ ಸಿದ್ದರಾಮಯ್ಯ ನೈತಿಕತೆ ಕಳೆದುಕೊಂಡಿದ್ದಾರೆ’ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಬುಧವಾರ ಇಲ್ಲಿ ಟೀಕಿಸಿದರು.

‘ಸಿದ್ದರಾಮಯ್ಯ ಮುಖ್ಯಮಂತ್ರಿ­ಯಾದ ಸಂದರ್ಭದಲ್ಲಿ ಕಳಂಕಿತರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದಿ­ದ್ದರು. ಅಂತೆಯೇ ಸಂತೋಷ್‌ ಲಾಡ್ ಅವರನ್ನು ಸಂಪುಟದಿಂದ ಕೈಬಿಟ್ಟರು. ಆದರೆ ಈಗ ಶಿವಕುಮಾರ್‌ ಮತ್ತು ರೋಷನ್‌ ಬೇಗ್‌ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ. ಅವರಿಗೆ ನಿಜಕ್ಕೂ ಸ್ವಾಭಿಮಾನ ಎಂಬುದು ಇದ್ದರೆ ಮುಖ್ಯ­ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿ. ಇಲ್ಲವೇ, ಯಾವ ನೈತಿಕತೆ ಮೇಲೆ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ ಎಂಬು­ದನ್ನು ಸ್ಪಷ್ಟಪಡಿಸಲಿ. ಭ್ರಷ್ಟರಿಗೆ ಕಾಂಗ್ರೆಸ್‌­ನಲ್ಲಿ ಅವಕಾಶವಿಲ್ಲ ಎಂದಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಕೂಡ ಇದಕ್ಕೆ ಉತ್ತರಿಸಬೇಕು’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

‘ಕಾಂಗ್ರೆಸ್‌ನ 40–50 ಶಾಸಕರು ಸಿದ್ದರಾಮಯ್ಯ ವಿರುದ್ಧ ಬಂಡೆದಿದ್ದು, ಸದ್ಯದಲ್ಲೇ ಅವರ ಸ್ಥಾನಪಲ್ಲಟ­ವಾಗಲಿದೆ’ ಎಂದ ಶೆಟ್ಟರ್‌ ಹೇಳಿದರು.
‘ಗುರುವಾರ ಬೆಂಗಳೂರಿನಲ್ಲಿ ಬಿಜೆಪಿ ಕೋರ್‌ ಕಮಿಟಿ ಸಭೆ ನಡೆಯ­ಲಿದ್ದು, ಮುಂದಿನ ಹೋರಾಟದ ಬಗ್ಗೆ ಅಲ್ಲಿ ನಿರ್ಧರಿಸಲಾಗುವುದು’ ಎಂದು ವಿವರಿಸಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಬಿಜೆಪಿಗೆ ಮರು ಸೇರ್ಪಡೆಯಾಗುವುದರಿಂದ ತಮ್ಮ ಪಕ್ಷವೂ ಕಳಂಕಿತರನ್ನು ಒಪ್ಪಿಕೊಂಡಂತೆ ಆಗುವುದಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಲು ತಡವರಿಸಿದ ಅವರು, ‘ಅವರಾಗಿಯೇ ಪಕ್ಷ ಬಿಟ್ಟು ಹೋಗಿದ್ದರು. ಈಗ ಮತ್ತೆ ಬರುತ್ತಿದ್ದಾರೆ. ಹಳೆಯದನ್ನೆಲ್ಲ ಮರೆತು ಒಂದಾಗುತ್ತೇವೆ’ ಎಂದಷ್ಟೇ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.