ADVERTISEMENT

ಶಿವಮೊಗ್ಗ: ಬಂಪರ್ ಕೊಡುಗೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2011, 18:50 IST
Last Updated 24 ಫೆಬ್ರುವರಿ 2011, 18:50 IST

ಶಿವಮೊಗ್ಗ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗುರುವಾರ ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ ಶಿವಮೊಗ್ಗ ಜಿಲ್ಲೆಗೆ ಬಂಪರ್ ಕೊಡುಗೆಗಳನ್ನು ನೀಡಿದ್ದಾರೆ.

ಶಿವಮೊಗ್ಗದ ಸುತ್ತಲಿರುವ ಎಲ್ಲ ವರ್ತುಲ ರಸ್ತೆಗಳ ಅಭಿವೃದ್ಧಿಗೆ 100 ಕೋಟಿ ರೂ, ಎಂಪಿಎಂ ಪುನಶ್ಚೇತನಕ್ಕೆ 100 ಕೋಟಿ ರೂ, ಎಂಎಡಿಬಿಗೆ 34ಲಕ್ಷ ರೂ, ಶಿವಮೊಗ್ಗ-ಶೃಂಗೇರಿ-ರಂಭಾಪುರಿವರೆಗಿನ ರಸ್ತೆ ಅಭಿವೃದ್ಧಿಗೆ 35 ಕೋಟಿ ರೂ, ಅಂಜನಾಪುರ ಜಲಾಶಯ ಅಭಿವೃದ್ಧಿಗೆ 10 ಕೋಟಿ ರೂ, ಕ್ರೀಡಾ ಸಮುಚ್ಚಯಕ್ಕೆ 10ಕೋಟಿ ರೂ. ಸೊರಬದ ಕವಚಿಯಲ್ಲಿ ಬೃಹತ್ ನೀರಾವರಿ ಯೋಜನೆ... ಹೀಗೆ ಜಿಲ್ಲೆಯ ವಿವಿಧ ಯೋಜನೆಗಳಿಗೆ ಮುಖ್ಯಮಂತ್ರಿಗಳು ಸಾಕಷ್ಟು ಹಣ ಹರಿಸಿದ್ದಾರೆ.

ಇದಲ್ಲದೇ, ಖಾಸಗಿ ಸಹಭಾಗಿತ್ವದಲ್ಲಿ ಶಿವಮೊಗ್ಗ-ಹಾನಗಲ್ ರಸ್ತೆ ಅಭಿವೃದ್ಧಿ, ಸಾಗರದ ಉಪ್ಪಳ್ಳಿಯಲ್ಲಿ ಮಲೆನಾಡು ಗಿಡ್ಡ ತಳಿಗಳ ಅಭಿವೃದ್ಧಿ ಕೇಂದ್ರ ಸ್ಥಾಪನೆ, ಆಯುರ್ವೇದ ಕಾಲೇಜು ಆರಂಭ, ಶಿಕಾರಿಪುರದಲ್ಲಿ ‘ಇ-ಆಡಳಿತ’ ವಿಭಾಗ ಹಾಗೂ ಪಶು ಆಹಾರ ತಯಾರಿಕಾ ಘಟಕ ಸ್ಥಾಪನೆ ಮಾಡುವುದಾಗಿ ನೂತನ ಯೋಜನೆಗಳನ್ನು ಮುಖ್ಯಮಂತ್ರಿಗಳು ಘೋಷಿಸಿದ್ದಾರೆ.
ಪಶು ಆಹಾರ ಉತ್ಪಾದನಾ ಘಟಕ 45 ಕೋಟಿ ರೂ.ಗಳಲ್ಲಿ ಸ್ಥಾಪನೆಯಾಗಲಿದ್ದು, ಇದಕ್ಕೆ ಪ್ರಸಕ್ತ ಸಾಲಿನಲ್ಲಿ 20 ಕೋಟಿ ರೂ ನೀಡಲಾಗುವುದು ಎಂದು ತಿಳಿಸಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಬಹು ನಿರೀಕ್ಷಿತ ದಂಡಾವತಿ ಯೋಜನೆ ಕಾರ್ಯಾರಂಭಗೊಳ್ಳಲಿದೆ.

ಭದ್ರಾವತಿಯ ಎಂಪಿಎಂ ಕಾರ್ಖಾನೆ ಇಂದು ನಷ್ಟದಲ್ಲಿದ್ದು, ಅದರ ಪುನಶ್ಚೇತನಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಅದಕ್ಕೆ ಸ್ಪಂದಿಸಿ, 100 ಕೋಟಿ ರೂ ಸಂಪನ್ಮೂಲ ಕ್ರೋಡೀಕರಣಕ್ಕೆ ಮೀಸಲಿಡಲಾಗಿದೆ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲ, ಶಿಕಾರಿಪುರದ ಅಂಜನಾಪುರ ಜಲಾಶಯವನ್ನು ಸಮಗ್ರ ಅಭಿವೃದ್ಧಿಪಡಿಸಿ, ಅಲ್ಲಿ ದೋಣಿವಿಹಾರಕ್ಕೂ ವ್ಯವಸ್ಥೆ ಮಾಡಲು ಯೋಜನೆ ರೂಪಿಸಿದೆ.

ಸಾಗರ-ಹೊಸನಗರ ಜನರ ಬಹುನಿರೀಕ್ಷಿತ ಹೊಸನಗರ ತಾಲ್ಲೂಕಿನ ‘ಬೆಕ್ಕೋಡಿ’ ಸೇತುವೆ ನಿರ್ಮಾಣಕ್ಕೆ 25 ಕೋಟಿ ರೂ. ನೀಡಿದ್ದಾರೆ. ಅಷ್ಟೇ ಅಲ್ಲ, ಜಿಲ್ಲೆಯಲ್ಲಿ ಪ್ರಗತಿಯಲ್ಲಿರುವ ರೈಲ್ವೆ ಕಾಮಗಾರಿಗಳಿಗೆ ರಾಜ್ಯ ಸರ್ಕಾರದ ಪಾಲಿನ ಹಣ, ವಿಮಾನ ನಿಲ್ದಾಣ ಕಾಮಗಾರಿಗೂ ಹಣ ಮೀಸಲಿಟ್ಟಿದ್ದಾರೆ. ಜತೆಗೆ ನಗರದ ಶಿವಗಂಗಾ ಯೋಗ ಟ್ರಸ್ಟ್‌ಗೆ 25 ಲಕ್ಷ ರೂ ಮೀಸಲಿಟ್ಟಿದ್ದಾರೆ.
ಸಾವಯವ ಕೃಷಿಯಲ್ಲಿ ಕ್ರಾಂತಿ ಮಾಡಿದ ತೀರ್ಥಹಳ್ಳಿಯ ಪುರುಷೋತ್ತಮ್‌ರಾಯರಿಗೆ ‘ಸಾವಯವ ಕೃಷಿ ರತ್ನ ಪ್ರಶಸ್ತಿ’ ಹಾಗೂ ಅವರ ಹೆಸರಿನಲ್ಲಿರುವ ಪ್ರತಿಷ್ಠಾನಕ್ಕೆ 10ಲಕ್ಷ ರೂ ಮೀಸಲಿಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.