ADVERTISEMENT

ಶಿವಮೊಗ್ಗ, ಹಾವೇರಿ ಸುತ್ತವೇ ಪಿ.ಡಬ್ಲು.ಡಿ ಗಿರಕಿ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2011, 19:30 IST
Last Updated 1 ಮಾರ್ಚ್ 2011, 19:30 IST

ಬೆಂಗಳೂರು:  ಲೋಕೋಪಯೋಗಿ ಇಲಾಖೆಯು ಕೇವಲ ಶಿವಮೊಗ್ಗ, ಹಾವೇರಿ ಸುತ್ತ ಗಿರಕಿ ಹೊಡೆಯುತ್ತಿದೆ. ಇಡೀ ರಾಜ್ಯದ ರಸ್ತೆಗಳತ್ತ ಗಮನಹರಿಸುತ್ತಿಲ್ಲ ಎಂದು ವಿಧಾನಪರಿಷತ್ತಿನಲ್ಲಿ ಮಂಗಳವಾರ ಪ್ರಶ್ನೋತ್ತರ ವೇಳೆಯಲ್ಲಿ ವಿರೋಧ ಪಕ್ಷಗಳ ಸದಸ್ಯರು ಸರ್ಕಾರವನ್ನು ತರಾಟೆಗೆ ತಗೆದುಕೊಂಡರು.

ರಸ್ತೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಾತನಾಡಿದ ಕಾಂಗ್ರೆಸ್ಸಿನ ವಿ. ಆರ್. ಸುದರ್ಶನ್, ‘ಲೋಕೋಪಯೋಗಿ ಇಲಾಖೆ ಶಿವಮೊಗ್ಗ, ಹಾವೇರಿ ಸುತ್ತವೇ ಸುತ್ತುತ್ತಿದೆ. ಇದಕ್ಕೆ ಸಚಿವರಾದ ನೀವುಗಳೇ ಕಾರಣ. ರಾಜ್ಯದ ವಿವಿಧ ಭಾಗಗಳಲ್ಲಿ ಕೆಟ್ಟುಹೋಗಿರುವ ರಸ್ತೆಗಳು ನಿಮಗೆ ಕಾಣಿಸುತ್ತಿಲ್ಲವೇ? ಕೇವಲ ನಿಮ್ಮ ನಿಮ್ಮ ಜಿಲ್ಲೆಗಳಿಗೆ ಸೀಮಿತರಾಗಬೇಡಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜೆಡಿಎಸ್‌ನ ಎಂ.ಸಿ. ನಾಣಯ್ಯ ಕೂಡ ಇದಕ್ಕೆ ಸಾಥ್ ನೀಡಿದರು. 

ಈ ಆರೋಪಗಳನ್ನು ತಳ್ಳಿಹಾಕಿದ ಸಚಿವ ಸಿ.ಎಂ. ಉದಾಸಿ, ‘ಇಂತಹ ತಾರತಮ್ಯ ಮಾಡುತ್ತಿಲ್ಲ. ಎಲ್ಲ ಭಾಗಗಳಿಗೆ ಅನುದಾನ ನೀಡಲಾಗುತ್ತಿದೆ. ಎಲ್ಲೊ ಒಂದೆರಡು ಕಡೆ ಹೀಗಾಗಿರಬಹುದು ಅಷ್ಟೇ. ಶಿರಾಡಿ ಘಾಟ್ ಸೇರಿದಂತೆ ಇತರೆ ಘಾಟ್ ರಸ್ತೆಗಳಿಗೆ ಕಾಂಕ್ರೀಟ್ ಮೇಲ್ಪದರ ಹಾಕಲು ಕ್ರಮಕೈಗೊಳ್ಳಲಾಗುತ್ತಿದೆ’ ಎಂದರು.

ಉಂಡಬತ್ತಿ ಕೆರೆಗೆ ತಡೆಗೋಡೆ:  ಮೈಸೂರು ಸಮೀಪದ ಉಂಡಬತ್ತಿ ಕೆರೆಗೆ ಇತ್ತೀಚೆಗೆ ಟೆಂಪೊ ಉರುಳಿ ಬಿದ್ದು 31 ಜನ ಸಾವಿಗೀಡಾದ ಘಟನೆ ಹಾಗೂ ಇದೇ ಕೆರೆಗೆ ಸಚಿವ ಗೋವಿಂದ ಕಾರಜೋಳ ಅವರ ಸಂಬಂಧಿಕರು ಪ್ರಯಾಣಿಸುತ್ತಿದ್ದ ಕಾರು ಉರುಳಿ ಬಿದ್ದ ಘಟನೆಯೂ ವಿಧಾನ ಪರಿಷತ್ತಿನಲ್ಲಿ ಮಾರ್ದನಿಸಿತು.

ರಾಜ್ಯದಲ್ಲಿರುವ ರಸ್ತೆಗಳ ದುಃಸ್ಥಿತಿ ಕುರಿತು ಚರ್ಚಿಸುತ್ತಿರುವ ಸಂದರ್ಭ   ದಲ್ಲಿ ನಾಣಯ್ಯ ಅವರು ಈ ದುರ್ಘಟನೆಗಳನ್ನು ನೆನಪಿಸಿಕೊಂಡರು. ಪ್ರತಿಕ್ರಿಯಿಸಿದ ಸಚಿವ ಉದಾಸಿ ಅವರುಕೆರೆಗೆ ತಡೆಗೋಡೆ ನಿರ್ಮಿಸಲು ತಕ್ಷಣ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.

ಸುಪ್ರೀಂ ಕೋರ್ಟ್ ಆದೇಶ ಕಾರಣ:  ಮೈಸೂರು-ಮಾನಂದವಾಡಿ ರಾಜ್ಯ ಹೆದ್ದಾರಿಯ ಹೊನ್ನಮ್ಮನ ಕಟ್ಟೆಯಿಂದ ಉದ್ಬೂರು ಕ್ರಾಸ್‌ವರೆಗಿನ ರಸ್ತೆಯು ಅರಣ್ಯ ಪ್ರದೇಶದಲ್ಲಿ ಹಾದು ಹೋಗಿದ್ದು, ಇಲ್ಲಿ ಕಾಮಗಾರಿ ನಡೆಸದಂತೆ ಸುಪ್ರೀಂ ಕೋರ್ಟ್    ಆದೇಶ ನೀಡಿರುವ ಹಿನ್ನೆಲೆಯಲ್ಲಿ ರಸ್ತೆಯನ್ನು ಮುಚ್ಚಲಾಗಿದೆ ಎಂದು ಉದಾಸಿ ಅವರು ಸಂದೇಶ್ ನಾಗರಾಜ್ ಅವರ ಪ್ರಶ್ನೆಗೆ ಉತ್ತರಿಸಿದರು.

‘ಇದಕ್ಕೆ ಪರ್ಯಾಯವಾಗಿ ಹೊನ್ನಮ್ಮನ ಕಟ್ಟೆ, ಹೊಸಹೊಳಲು, ಕೆ.ಆರ್.ಪುರ, ಮಗ್ಗೆ, ಬೆಳ್ತೂರು, ಗುಂಡತ್ತೂರು ಹಳ್ಳಿಗಳ ಮೂಲಕ ಹಾದು ಹೋಗುವ 14 ಕಿ.ಮೀ ಉದ್ದದ ರಸ್ತೆಯನ್ನು ನಿರ್ಮಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಸದ್ಯದಲ್ಲಿಯೇ ಕಾಮಗಾರಿ ಆರಂಭಿಸಲಾಗುವುದು’ ಎಂದು ಅವರು ತಿಳಿಸಿದರು.

1610 ಕೋಟಿ ಬಾಕಿ: ಕಾಮಗಾರಿಗಳನ್ನು ಪೂರ್ಣಗೊಳಿಸಿದ ಗುತ್ತಿಗೆದಾರರಿಗೆ ನೀಡಬೇಕಾಗಿರುವ ಬಾಕಿ ಬಿಲ್ ಮೊತ್ತ ರೂ 1,610 ಕೋಟಿ ಎಂದು ಉದಾಸಿ ಅವರು ಕಾಂಗ್ರೆಸ್ಸಿನ ಖಾಜಿ ಅರಶದ ಅಲಿ ಅವರ ಪ್ರಶ್ನೆಗೆ ಉತ್ತರ ನೀಡಿದರು.

ಕಳೆದ ಎರಡು ವರ್ಷಗಳಲ್ಲಿ ಕಾಮಗಾರಿಗಳಿಗೆ ಬಿಡುಗಡೆಯಾದ ಒಟ್ಟು ಮೊತ್ತ ರೂ 4,250 ಕೋಟಿ. ಬಾಕಿ ಉಳಿದಿರುವ ಹಣವನ್ನು ಶೀಘ್ರದಲ್ಲಿ ಬಿಡುಗಡೆ ಮಾಡುವುದಾಗಿ ಅವರು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.