ADVERTISEMENT

ಶೀಘ್ರ ಶಾಸಕರ ವಿದೇಶ ಯಾತ್ರೆ ಆರಂಭ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2012, 19:30 IST
Last Updated 11 ಆಗಸ್ಟ್ 2012, 19:30 IST

ಬೆಂಗಳೂರು: `ರಾಜ್ಯದಲ್ಲಿ ಭೀಕರ ಬರ ಇದೆ. ಶಾಸಕರು ವಿದೇಶ ಪ್ರವಾಸ ಹೋಗುವುದು ಬೇಡ~ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೀಡಿದ್ದ ಸಲಹೆಗೆ ಯಾವೊಬ್ಬ ಶಾಸಕರೂ ಸ್ಪಂದಿಸಿಲ್ಲ. ಬದಲಿಗೆ, ಒತ್ತಡ ಹಾಕಿ ವಿದೇಶ ಪ್ರವಾಸಕ್ಕೆ ಅನುಮತಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ತಿಂಗಳಿಂದಲೇ ಶಾಸಕರ ವಿದೇಶ ಯಾತ್ರೆ ಆರಂಭವಾಗಲಿವೆ.

ಒಟ್ಟು ಏಳು ಸಮಿತಿಗಳ ಸದಸ್ಯರಿಗೆ ವಿದೇಶ ಪ್ರವಾಸಕ್ಕೆ ತೆರಳಲು ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಅನುಮತಿ ನೀಡಿದ್ದಾರೆ. ಶಾಸಕರು ಹಾಕಿದ ಒತ್ತಡವೇ ಇದಕ್ಕೆ ಕಾರಣ ಎನ್ನಲಾಗಿದೆ. ವಸತಿ ಸಮಿತಿಯಲ್ಲಿ 12 ಮಂದಿ ವಿಧಾನಸಭಾ ಸದಸ್ಯರು ಇರುತ್ತಾರೆ. ಇತರೆ ಸಮಿತಿಗಳಲ್ಲಿ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ 15 ರಿಂದ 20 ಸದಸ್ಯರು ಇರುತ್ತಾರೆ.

ವಿಧಾನಸಭೆ ಉಪಾಧ್ಯಕ್ಷ ಯೋಗೀಶ್ ಭಟ್ ಅಧ್ಯಕ್ಷರಾಗಿರುವ ವಸತಿ ಸಮಿತಿ ಮತ್ತು ಅರ್ಜಿಗಳ ಸಮಿತಿ ಸದಸ್ಯರು ಒಟ್ಟಿಗೆ ಪ್ರವಾಸ ತೆರಳುತ್ತಿದ್ದಾರೆ. ಸೆ. 24ರಿಂದ ಅ.10ರವರೆಗೆ ರಷ್ಯಾ, ಫಿನ್‌ಲೆಂಡ್, ನಾರ್ವೆ, ಡೆನ್‌ಮಾರ್ಕ್, ಇಸ್ರೇಲ್, ಈಜಿಪ್ಟ್ ದೇಶಗಳಿಗೆ ಅಧ್ಯಯನ ಸಲುವಾಗಿ ಈ ಸಮಿತಿ ಸದಸ್ಯರು ತೆರಳಲಿದ್ದಾರೆ. ವಿಶೇಷವೆಂದರೆ ವಸತಿ ಸಮಿತಿಯಲ್ಲಿ ಯಡಿಯೂರಪ್ಪ ಅವರೂ ಸದಸ್ಯರು. ಅವರು ಪ್ರವಾಸ ಹೋಗುತ್ತಾರೊ ಇಲ್ಲವೊ ಎನ್ನುವುದು ಇನ್ನೂ ಖಚಿತವಾಗಿಲ್ಲ.

ಈ ಸಮಿತಿಗಳ ಜತೆ ತೆರಳಲು ನಾಲ್ಕು ಮಂದಿ ಅಧಿಕಾರಿಗಳಿಗೂ ಸ್ಪೀಕರ್ ಬೋಪಯ್ಯ ಅನುಮತಿ ನೀಡಿದ್ದಾರೆ. ಸ್ಪೀಕರ್ ಅವರ ಆಪ್ತ ಕಾರ್ಯದರ್ಶಿ ಎ.ಎನ್.ರಾಜಶೇಖರ, ಅಧೀನ ಕಾರ್ಯದರ್ಶಿ ಮಲ್ಲಪ್ಪ ಬಿ.ಕಾಳೆ, ಸಹಾಯಕ ಎಸ್ಟೇಟ್ ಅಧಿಕಾರಿ ಗೋಪಾಲ, ರೆಕಾರ್ಡಿಂಗ್ ಅಧಿಕಾರಿ ಎಂ.ಶಶಿಕಾಂತ್ ಅವರು ಸಮಿತಿ ಜತೆ ವಿದೇಶ ಪ್ರವಾಸಕ್ಕೆ ತೆರಳಲಿದ್ದಾರೆ.

ಈ ಸಮಿತಿಗಳಲ್ಲದೆ, ಸಿ.ಸಿ.ಪಾಟೀಲ್ ಅಧ್ಯಕ್ಷತೆಯ ಸಾರ್ವಜನಿಕ ಉದ್ದಿಮೆಗಳ ಸಮಿತಿ, ಸೀಮಾ ಮಸೂತಿ ಅಧ್ಯಕ್ಷತೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ, ಎಂ.ಚಂದ್ರಪ್ಪ ಅಧ್ಯಕ್ಷತೆಯ ಎಸ್‌ಸಿ/ಎಸ್‌ಟಿ ಕಲ್ಯಾಣ ಸಮಿತಿ, ಎಚ್.ಹಾಲಪ್ಪ ಅಧ್ಯಕ್ಷತೆಯ ಹಿಂದುಳಿದ ವರ್ಗಗಳ ಸಮಿತಿ, ಅಭಯ ಪಾಟೀಲ ಅಧ್ಯಕ್ಷತೆಯ ಅಂದಾಜು ಸಮಿತಿಯ ಸದಸ್ಯರಿಗೂ ವಿದೇಶ ಪ್ರವಾಸ ತೆರಳಲು ಸರ್ಕಾರ ಅನುಮತಿ ನೀಡಿದೆ. ಅಂದಾಜು ಸಮಿತಿ, ಸಾರ್ವಜನಿಕ ಉದ್ದಿಮೆ ಸಮಿತಿ ಮತ್ತು ಎಸ್‌ಸಿ/ಎಸ್‌ಟಿ ಸಮಿತಿ ಸದಸ್ಯರು ಈ ತಿಂಗಳ ಅಂತ್ಯಕ್ಕೆ ವಿದೇಶಕ್ಕೆ ತೆರಳುವರು.

ವಿದೇಶಕ್ಕೆ ತೆರಳುವ ಅಧಿಕಾರಿಗಳ ಪಟ್ಟಿಯಲ್ಲಿ ವಿಧಾನಮಂಡಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಎಂ.ಗುರುರಾಜ್, ಉಪ ಕಾರ್ಯದರ್ಶಿ ಅಲ್ಪೇಟೆ, ಆಂತರಿಕ ಆರ್ಥಿಕ ಸಲಹೆಗಾರ ಪಿ.ಬಿ.ಗಣೇಶ್, ಸಹಾಯಕ ಚರ್ಚಾ ಸಂಪಾದಕ ರಾಮಚಂದ್ರಾಚಾರಿ ಇತರರು ಸೇರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.