ADVERTISEMENT

ಶೀಘ್ರ ಷಡ್ಯಂತ್ರ ಬಯಲು: ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2012, 19:30 IST
Last Updated 3 ಡಿಸೆಂಬರ್ 2012, 19:30 IST

ರಾಮನಗರ: `ತಾಲ್ಲೂಕಿನ ಕರೇನಹಳ್ಳಿ ಮತ್ತು ಕೋಲಾರ ಜಿಲ್ಲೆಯ ಭಾಗದಲ್ಲಿ ಬೆಂಗಳೂರು ಮಹಾನಗರದ ಕಸವನ್ನು ವಿಲೇವಾರಿ ಮಾಡಲು ಸ್ಥಳ ಗುರುತಿಸಿರುವುದರ ಹಿಂದೆ ದೊಡ್ಡವರ ಷಡ್ಯಂತ್ರ ಅಡಗಿದ್ದು ಸದ್ಯದಲ್ಲಿಯೇ ಎಲ್ಲವನ್ನೂ ಬಯಲು ಮಾಡಲಾಗುವುದು' ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಗುಡುಗಿದರು. 

ಮೈಸೂರಿಗೆ ತೆರಳುವ ಸಂದರ್ಭದಲ್ಲಿ ಸೋಮವಾರ ನಗರದ ಐಜೂರು ವೃತ್ತದಲ್ಲಿ ಮಾತನಾಡಿದ ಅವರು, `ಕರೇನಳ್ಳಿ ಸುತ್ತಮುತ್ತ ಕಸ ಸುರಿಯುವುದರಿಂದ ಪರಿಸರ ನಾಶವಾಗುತ್ತದೆ. ನಂತರದ ದಿನಗಳಲ್ಲಿ ಈ ಭಾಗಗಳ ಭೂಮಿಯ ಬೆಲೆ ಕಡಿಮೆಯಾಗುತ್ತದೆ. ಆಗ ರೈತರು ಬಂದಷ್ಟು ಹಣಕ್ಕೆ ತಮ್ಮ ಭೂಮಿಯನ್ನು ಮಾರಾಟ ಮಾಡುತ್ತಾರೆ. ಸುತ್ತಮುತ್ತಲ ಭೂಮಿಯನ್ನು ಪೂರ್ಣ ಪ್ರಮಾಣದಲ್ಲಿ ಖರೀದಿ ಮಾಡಿದ ನಂತರ ಕಸ ಹಾಕುವ ಜಾಗವನ್ನು ಬೇರೆಡೆಗೆ ವರ್ಗಾಯಿಸುತ್ತಾರೆ. ನಂತರ ಇಲ್ಲಿನ ಭೂಮಿಗೆ ಕೋಟ್ಯಂತರ ಬೆಲೆ ಬರುತ್ತದೆ. ಆಗ ಭೂ ಮಾಲೀಕರು ತಮಗಿಷ್ಟ ಬಂದಷ್ಟು ಹಣವನ್ನು ಕೊಳ್ಳೆ ಹೊಡೆಯುವ ಉದ್ದೇಶ ಹೊಂದಿದ್ದಾರೆ. ಈ ಕಾರಣಕ್ಕಾಗಿಯೇ ಗುತ್ತಿಗೆದಾರರು ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಸದ್ಯದಲ್ಲಿಯೇ ಇದರ ಸಂಪೂರ್ಣ ಅಂತರಾಳವನ್ನು ರಾಜ್ಯದ ಜನರ ಮುಂದಿಡುತ್ತೇನೆ' ಎಂದು ಹೇಳಿದರು.

ಸರ್ಕಾರವು ಕಸ ವಿಲೇವಾರಿಗೆ ಗುರುತಿಸಿರುವ ಸ್ಥಳ ಸೂಕ್ತವಾಗಿದೆ ಎಂಬ ಅರಣ್ಯ ಸಚಿವ ಸಿ.ಪಿ. ಯೋಗೇಶ್ವರ್ ಹೇಳಿಕೆ ವಿರುದ್ಧ ಅವರು ಕಿಡಿ ಕಾರಿದರು.   `ಸಚಿವರಿಗೆ ಕಸದ ಮೇಲೆ ಅಷ್ಟೊಂದು ಪ್ರೀತಿಯಿದ್ದರೆ ತಮ್ಮ ಸ್ವ ಗ್ರಾಮ ಚಕ್ಕೆರೆಗೇ ಎಲ್ಲ ಕಸವನ್ನೂ ತರಿಸಿಕೊಂಡು ಅದನ್ನು ಸಂಸ್ಕರಿಸಿ ತೋರಿಸಲಿ. ಸಚಿವರಾದವರು ರೈತರ ಭೂಮಿಗೆ ತಂದು ಹಾಕುವ ಕಸದ ಬಗ್ಗೆ ಬೇಜಾವಾಬ್ದಾರಿಯಿಂದ ಹೇಳಿಕೆ ನೀಡುವುದು ಸರಿಯಲ್ಲ' ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.