ADVERTISEMENT

ಶುಲ್ಕ ವಿನಾಯಿತಿಗೆ ಆದಾಯ ಮಿತಿ: ಆದೇಶ ಹಿಂಪಡೆಯಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 23 ಜುಲೈ 2012, 19:15 IST
Last Updated 23 ಜುಲೈ 2012, 19:15 IST

ಬೆಂಗಳೂರು: ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಶುಲ್ಕ ವಿನಾಯಿತಿಗೆ ಆದಾಯ ಮಿತಿ ಹೇರಿ ಹೊರಡಿಸಿರುವ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಕೋರಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ಪತ್ರ ಬರೆಯಲಾಗುವುದು ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ತಿಳಿಸಿದರು.

ಸರ್ಕಾರ ಒಂದು ವಾರದಲ್ಲಿ ಆದೇಶ ಹಿಂಪಡೆಯದಿದ್ದರೆ ಪಕ್ಷದ ವತಿಯಿಂದ ಶಾಂತಿಯುತ ಹೋರಾಟ ಆರಂಭಿಸಲಾಗುವುದು. ಈ ಆದೇಶದಿಂದಾಗಿ ಹಿಂದುಳಿದ ವರ್ಗಗಳ ಸಾವಿರಾರು ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಅವರು ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಕುಟುಂಬದ ವಾರ್ಷಿಕ ಆದಾಯ 11 ಸಾವಿರ ರೂಪಾಯಿಗಿಂತ ಕಡಿಮೆ ಇರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗುತ್ತಿತ್ತು. ಪ್ರವರ್ಗ 1ರಲ್ಲಿ ಬರುವ  ವಿದ್ಯಾರ್ಥಿಗಳಿಗೆ ಆದಾಯ ಮಿತಿ ಇರಲಿಲ್ಲ. ಆದರೆ ಶುಲ್ಕ ವಿನಾಯಿತಿ ಪಡೆಯಲು ಪ್ರವರ್ಗ 1ಕ್ಕೆ ಸೇರಿದ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ ಒಂದು ಲಕ್ಷ ರೂಪಾಯಿ, 2ಎ, 3ಎ ಮತ್ತು 3ಬಿ ಪ್ರವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ 44,500 ರೂಪಾಯಿಗಿಂತ ಕಡಿಮೆ ಇರಬೇಕು ಎಂದು ಜೂನ್ 23ರಂದು ಸರ್ಕಾರ ಆದೇಶ ಹೊರಡಿಸಿದೆ ಎಂದು ವಿವರಿಸಿದರು.

ರಾಜ್ಯ ಲೋಕಸೇವಾ ಆಯೋಗದ ಮೂಲಕ ಇತ್ತೀಚೆಗೆ ಸಾವಿರಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಆದರೆ ಹೊಸದಾಗಿ ಭರ್ತಿ ಮಾಡಲಾದ ಹುದ್ದೆಗಳಿಗೆ ಮುಸ್ಲಿಂ ಸಮುದಾಯಕ್ಕೆ ಸೇರಿದ ಒಬ್ಬರನ್ನೂ ನೇಮಕ ಮಾಡಿಲ್ಲ ಎಂದು ದೂರಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.