ADVERTISEMENT

ಶೃಂಗೇರಿ: ಇಲ್ಲಿ ಗೆಲ್ಲುವ ಪಕ್ಷವೇ ಅಧಿಕಾರಕ್ಕೆ?

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2013, 19:59 IST
Last Updated 16 ಏಪ್ರಿಲ್ 2013, 19:59 IST

ಚಿಕ್ಕಮಗಳೂರು: ಶೃಂಗೇರಿ ಶಾರದಾಂಬೆ ಸನ್ನಿಧಿ ಯಾತ್ರಾರ್ಥಿಗಳನ್ನು ಸೆಳೆಯುವಂತೆ, ಶೃಂಗೇರಿ ವಿಧಾನಸಭಾ ಕ್ಷೇತ್ರವೂ ರಾಜಕೀಯ ಆಸಕ್ತರ ಚಿತ್ತವನ್ನು ಚುನಾವಣಾ ಕಾಲದಲ್ಲಿ ತನ್ನತ್ತ ಹರಿಯುವಂತೆ ಮಾಡುತ್ತದೆ.

ಅಪ್ಪಟ ಮಲೆನಾಡು ಎನಿಸಿದ ಎನ್.ಆರ್.ಪುರ, ಕೊಪ್ಪ ಮತ್ತು ಶೃಂಗೇರಿ ತಾಲ್ಲೂಕುಗಳು ಪೂರ್ತಿ ಹಾಗೂ ಚಿಕ್ಕಮಗಳೂರು ತಾಲ್ಲೂಕಿನ ಕೆಲ ಭಾಗ ಒಳಗೊಂಡಿರುವ ಶೃಂಗೇರಿ ಕ್ಷೇತ್ರ, 1952ರ ಮೊದಲ ಚುನಾವಣೆಯಲ್ಲಿ ತೀರ್ಥಹಳ್ಳಿ-ಕೊಪ್ಪ ವಿಧಾನಸಭಾ ಕ್ಷೇತ್ರವಾಗಿತ್ತು. ಕ್ಷೇತ್ರ ಒಂದು ಕಾಲಕ್ಕೆ ಕಾಂಗ್ರೆಸ್ ಭದ್ರಕೋಟೆ. ಎರಡು ಬಾರಿ ಜನತಾ ಪರಿವಾರ ಮತ್ತು ಒಮ್ಮೆ ಜನತಾ ದಳಕ್ಕೂ ಒಲಿದಿದೆ. ಎರಡು ಅವಧಿಯಿಂದ ಬಿಜೆಪಿ ಹಿಡಿತದಲ್ಲಿದೆ.

2004 ಮತ್ತು 2008ರ ವಿಧಾನಸಭೆ ಚುನಾವಣೆಯಲ್ಲಿ ಆಯ್ಕೆಯಾಗಿರುವ ಡಿ.ಎನ್.ಜೀವರಾಜ್ ಈ ಬಾರಿಯೂ ಗೆದ್ದರೆ ಕಡಿದಾಳ್ ಮಂಜಪ್ಪ ಅವರ ಹೆಸರಿನಲ್ಲಿರುವ ದಾಖಲೆ ಸರಿಗಟ್ಟಿದಂತಾಗುತ್ತದೆ. ಜೀವರಾಜ್‌ಗೆ ಪೈಪೋಟಿ ನೀಡಲು ಕಾಂಗ್ರೆಸ್‌ನಿಂದ ಟಿ.ಡಿ.ರಾಜೇಗೌಡ ಮತ್ತು ಜೆಡಿಎಸ್‌ನಿಂದ ಹೋಟೆಲ್ ಉದ್ಯಮಿ ತಲಕಾಣೆ ರಾಜೇಂದ್ರ ಕಣಕ್ಕಿಳಿದಿದ್ದಾರೆ. ಬಿಎಸ್‌ಆರ್, ಸಿಪಿಐಎಂ ಅಭ್ಯರ್ಥಿ ಕಣಕ್ಕಿಳಿಸುವ ಸೂಚನೆ ನೀಡಿವೆ.  ಕಳೆದ 13 ವಿಧಾನಸಭಾ ಚುನಾವಣೆಗಳ ಫಲಿತಾಂಶ ತಿರುವಿ ನೋಡಿದಾಗ ಈ ಕ್ಷೇತ್ರದಲ್ಲಿ ಗೆದ್ದ ಅಭ್ಯರ್ಥಿ ಪ್ರತಿನಿಧಿಸುವ ಪಕ್ಷವೇ ರಾಜ್ಯದ ಚುಕ್ಕಾಣಿ ಹಿಡಿದಿದೆ.

1952ರ ಚೊಚ್ಚಲ ಚುನಾವಣೆಯಲ್ಲಿ ಕ್ಷೇತ್ರದಿಂದ ಆಯ್ಕೆಯಾದ ಕಡಿದಾಳ್ ಮಂಜಪ್ಪ ಅವರರಿಗೆ ಹ್ಯಾಟ್ರಿಕ್ ಗೆಲುವು ದೊರೆತಿದೆ. ಒಮ್ಮೆ ಅವಿರೋಧ ಆಯ್ಕೆಯೂ ಆಗಿ, ರಾಜ್ಯದ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದಾರೆ. ಅವರು ಇಲ್ಲಿ ಗೆದ್ದಾಗಲೆಲ್ಲ ಕಾಂಗ್ರೆಸ್ ಅಧಿಕಾರ ಹಿಡಿದಿದೆ. 1967 ಮತ್ತು 1972ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕೆ.ಎನ್.ವೀರಪ್ಪಗೌಡ ಆಯ್ಕೆಯಾಗಿದ್ದು, ಈ ಅವಧಿಯಲ್ಲೂ ಕಾಂಗ್ರೆಸ್‌ಗೆ ಅಧಿಕಾರ ಸಿಕ್ಕಿದೆ. 1978ರಲ್ಲಿ ಇಂದಿರಾ ಕಾಂಗ್ರೆಸ್‌ನಿಂದ ಬೇಗಾನೆ ರಾಮಯ್ಯ ಆಯ್ಕೆಯಾದರು. ಆಗಲೂ ದೇವರಾಜ ಅರಸು ನೇತೃತ್ವದ ಕಾಂಗ್ರೆಸ್ ರಾಜ್ಯದ ಆಡಳಿತ ನಡೆಸಿದೆ.

1983ರಲ್ಲಿ ಎಚ್.ಜಿ.ಗೋವಿಂದೇಗೌಡರು ಜನತಾ ಪರಿವಾರದ ಅಭ್ಯರ್ಥಿಯಾಗಿ ಮೊದಲ ಬಾರಿ ಆರಿಸಿ ಬಂದರು. ಆಗ ರಾಜ್ಯದ ಆಡಳಿತ ಚುಕ್ಕಾಣಿ ಜನತಾ ಪರಿವಾರದ ಕೈಗೆ ಹೋಯಿತು. ಆದರೆ, ಎರಡೇ ವರ್ಷಗಳಲ್ಲಿ ಜನತಾ ಪರಿವಾರ ಅಧಿಕಾರ ಕಳೆದುಕೊಂಡು 1985ರಲ್ಲಿ ಮಧ್ಯಂತರ ಚುನಾವಣೆ ಎದುರಾಯಿತು. ಜನತಾ ಪರಿವಾರದ ಅಭ್ಯರ್ಥಿ ಗೋವಿಂದೇ ಗೌಡರೇ ಮತ್ತೆ ಆಯ್ಕೆಯಾದರು. ಅಧಿಕಾರವೂ ಜನತಾ ಪರಿವಾರದ ಕೈಯಲ್ಲೇ ಉಳಿಯಿತು. 1989ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯು.ಕೆ.ಶಾಮಣ್ಣ ಅವರು, ಜನತಾ ಪರಿವಾರದ ಅಭ್ಯರ್ಥಿ ಗೋವಿಂದೇ ಗೌಡರನ್ನು ಮಣಿಸಿದರು. ಆಗ ಅಧಿಕಾರ ಚುಕ್ಕಾಣಿ ಕಾಂಗ್ರೆಸ್‌ಗೆ ಮರಳಿ ದಕ್ಕಿತು. 1994ರ ಚುನಾವಣೆಯಲ್ಲಿ ಎಚ್.ಜಿ.ಗೋವಿಂದೇಗೌಡರು ಜೆಡಿಎಸ್‌ನಿಂದ ಪುನಃ ಆರಿಸಿ ಬಂದಾಗ, ಕಾಕತಾಳೀಯ ಎಂಬಂತೆ ಜೆಡಿಎಸ್‌ಗೆ ರಾಜ್ಯದಲ್ಲಿ ಪೂರ್ಣ ಬಹುಮತ ಸಿಕ್ಕಿ, ಐದು ವರ್ಷ ಕಾಲ ಆಡಳಿತ ನಡೆಸಿತು.

1999ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಬಿ.ಚಂದ್ರೇಗೌಡ ಆರಿಸಿಬಂದರು. ಆಗ ಕಾಂಗ್ರೆಸ್‌ಗೆ ಪೂರ್ಣ ಬಹುಮತ ಸಿಕ್ಕಿ, 5 ವರ್ಷ ಕಾಲ ಎಸ್. ಎಂ.ಕೃಷ್ಣ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದರು.

2004ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎನ್.ಜೀವರಾಜ್ ಆಯ್ಕೆಯಾದರು. ಆದರೆ, ಬಿಜೆಪಿಗೆ ಅಧಿಕಾರ ಹಿಡಿಯುವಷ್ಟು ಸ್ಥಾನಗಳು ಲಭಿಸಲಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ನಡೆಸಿದವು. ಈ ಸಮ್ಮಿಶ್ರ ಸರ್ಕಾರವು ಹೆಚ್ಚು ಕಾಲ ಬಾಳಲಿಲ್ಲ. ಮತ್ತೆ ಜೆಡಿಎಸ್ ಮತ್ತು ಬಿಜೆಪಿ 20-20 ಸರ್ಕಾರ ರಚಿಸಿದವು. ಆಗ ಶೃಂಗೇರಿ ಕ್ಷೇತ್ರದಲ್ಲಿ ಗೆದ್ದ ಶಾಸಕರು ಪ್ರತಿನಿಧಿಸುವ ಪಕ್ಷಕ್ಕೆ ಅಧಿಕಾರ ದೊರೆಯುತ್ತದೆ ಎನ್ನುವ ವಾದಕ್ಕೆ ಬಲ ಸಿಕ್ಕಿತು. ಆದರೆ, 20-20 ಸರ್ಕಾರವೂ ಅವಧಿ ಪೂರ್ಣಗೊಳಿಸದೆ, ಬಿದ್ದು ಹೋಯಿತು.

2008ರ ಚುನಾವಣೆಯಲ್ಲಿ ಮತ್ತೆ ಡಿ.ಎನ್.ಜೀವರಾಜ್ ಗೆದ್ದುಬಂದರು. ಕ್ಷೇತ್ರದಿಂದ ಆಯ್ಕೆಯಾದ ಶಾಸಕರು ಪ್ರತಿನಿಧಿಸಿದ ಬಿಜೆಪಿ ರಾಜ್ಯದಲ್ಲಿ 5 ವರ್ಷ ಅಧಿಕಾರ ನಡೆಸಿದ ಪಕ್ಷವೆನಿಸಿಕೊಳ್ಳುತ್ತಿದೆ.

ಈ ಕ್ಷೇತ್ರದಲ್ಲಿ ಗೆಲ್ಲುವ ಪಕ್ಷವೇ ರಾಜ್ಯದಲ್ಲಿ ಅಧಿಕಾರ ಹಿಡಿಯುವುದು ಖಚಿತ ಎನ್ನುವ ವಾದವನ್ನು ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳು ನಂಬುತ್ತಾರೆ. ಈ ಬಾರಿ ಬಿಜೆಪಿಯು ವಿಜಯ ಸಂಕಲ್ಪ ಯಾತ್ರೆಯನ್ನು ಚಾಮುಂಡೇಶ್ವರಿ ಸನ್ನಿಧಿ ಮೈಸೂರು ಮತ್ತು ಶಾರದೆ ಸನ್ನಿಧಿ ಶೃಂಗೇರಿ ಕ್ಷೇತ್ರದಿಂದ ಏಕಕಾಲದಲ್ಲಿ ಒಂದೇ ದಿನ ಆರಂಭಿಸಿತು. ಕಳೆದ ಒಂದು ವರ್ಷದಿಂದಲೇ ಪ್ರತಿಪಕ್ಷಗಳ ಸಂಭವನೀಯ ಅಭ್ಯಥಿಗಳು, ಆಡಳಿತ ಪಕ್ಷದ ಅಭ್ಯರ್ಥಿ ಚುನಾವಣಾ ತಯಾರಿ ನಡೆಸುತ್ತಿದ್ದರು. ಚುನಾವಣಾ ಕಾವು ಈಗಂತೂ ದಿನದಿನಕ್ಕೂ  ಹೆಚ್ಚುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.