ADVERTISEMENT

ಶೋಭಾ ದೆಹಲಿ ಭೇಟಿ ಉದ್ದೇಶ ಗೊತ್ತಿಲ್ಲ: ಸಿ.ಎಂ

​ಪ್ರಜಾವಾಣಿ ವಾರ್ತೆ
Published 4 ಜನವರಿ 2012, 19:30 IST
Last Updated 4 ಜನವರಿ 2012, 19:30 IST

ಮಂಗಳೂರು: `ಸಚಿವೆ ಶೋಭಾ ಕರಂದ್ಲಾಜೆ ಅವರು ದೆಹಲಿಗೆ ಹೋಗಿರುವ ಉದ್ದೇಶ ನನಗೇನೂ ಗೊತ್ತಿಲ್ಲ. ಹೈಕಮಾಂಡ್‌ಗೆ ಅವರು ಸಹಜವಾಗಿ ರಾಜ್ಯದ ವಿದ್ಯಮಾನ ತಿಳಿಸಿರುತ್ತಾರೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯ ಇಲ್ಲ~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹೇಳಿದರು.

ರಾಜ್ಯದಿಂದ ಹೋಗುವ ಪ್ರತಿಯೊಬ್ಬ ಸಚಿವರೂ ಪಕ್ಷದ ವರಿಷ್ಠರನ್ನು ಕಂಡು ಮಾತನಾಡುವುದು ಸಾಮಾನ್ಯವಾಗಿ ನಡೆದುಕೊಂಡು ಬಂದಿರುವ ಸಂಪ್ರದಾಯ. ಸಚಿವರಾಗಿ ರಾಜ್ಯದ ವಿದ್ಯಮಾನಗಳನ್ನು ವರಿಷ್ಠರಿಗೆ ತಿಳಿಸುವ ಹೊಣೆಗಾರಿಕೆಯೂ ಅವರಿಗಿದೆ.

ಸದ್ಯ ಪಕ್ಷದ ರಾಜ್ಯ ಘಟಕದಲ್ಲಿ ಕಾಣಿಸಿಕೊಂಡಿರುವ ಬಿಕ್ಕಟ್ಟಿನಿಂದಾಗಿ ಶೋಭಾ ಅವರ ಈ ಭೇಟಿಗೆ ವಿಶೇಷ ಅರ್ಥ ಕಲ್ಪಿಸಲಾಗುತ್ತಿದೆ ಅಷ್ಟೆ ಎಂದು ಅವರು ಬುಧವಾರ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರಿಗೆ ತಿಳಿಸಿದರು.

`ಈಶ್ವರಪ್ಪ ಮತ್ತು ಯಡಿಯೂರಪ್ಪ ಅವರ ನಡುವಿನ ಗೊಂದಲ ನಿವಾರಿಸಲು ಪ್ರಯತ್ನಿಸುತ್ತಿದ್ದೇವೆ. ಒಂದು ಹಂತದಲ್ಲಿ ಅದು ನಿವಾರಣೆಯಾಗುವ ವಿಶ್ವಾಸವೂ ಇದೆ. ಆದರೂ ಬಿಕ್ಕಟ್ಟು ಶಮನಕ್ಕೆ ಪಕ್ಷದ ಹಿರಿಯರು, ವರಿಷ್ಠರು ಮಧ್ಯಪ್ರವೇಶ ಮಾಡುವ ಅಗತ್ಯ ಇದೆ~ ಎಂದರು.

ಮಾರ್ಚ್ ಮೊದಲ ವಾರ ವಿಧಾನಮಂಡಲ ಬಜೆಟ್ ಅಧಿವೇಶನ ನಡೆಯಲಿದೆ. ಇದೇ 30ರಿಂದ 10 ದಿನಗಳ ಕಾಲ ಅಧಿವೇಶನ ನಡೆಯಲಿದ್ದು, ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಉಪಯುಕ್ತ ಚರ್ಚೆ ನಡೆಯಲಿವೆ.
ಮಂಗಳೂರಿನಲ್ಲಿ ಇದೇ 12ರಿಂದ 5 ದಿನಗಳ ಕಾಲ ನಡೆಯುವ ಯುವಜನೋತ್ಸವಕ್ಕೆ ಸಿದ್ಧತೆಗಳು ತೃಪ್ತಿಕರವಾಗಿ ನಡೆಯುತ್ತಿವೆ ಎಂದು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.