ADVERTISEMENT

‘ಶ್ರೀಕೃಷ್ಣ ಮಠಕ್ಕೆ ಬರಲು ಮುಖ್ಯಮಂತ್ರಿಗೆ ಆಹ್ವಾನ’

​ಪ್ರಜಾವಾಣಿ ವಾರ್ತೆ
Published 15 ಜೂನ್ 2017, 19:30 IST
Last Updated 15 ಜೂನ್ 2017, 19:30 IST
‘ಶ್ರೀಕೃಷ್ಣ ಮಠಕ್ಕೆ ಬರಲು ಮುಖ್ಯಮಂತ್ರಿಗೆ ಆಹ್ವಾನ’
‘ಶ್ರೀಕೃಷ್ಣ ಮಠಕ್ಕೆ ಬರಲು ಮುಖ್ಯಮಂತ್ರಿಗೆ ಆಹ್ವಾನ’   

ಉಡುಪಿ: ‘ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ಭೇಟಿ ವೇಳೆ ಕೃಷ್ಣ ಮಠಕ್ಕೆ ಬನ್ನಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಲಾಗಿದೆ. ಬರೋದು, ಬಿಡೋದು ಅವರಿಗೆ ಬಿಟ್ಟಿದ್ದು’ ಎಂದು ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಗುರುವಾರ ಇಲ್ಲಿ ಹೇಳಿದರು.

‘ಸಿದ್ದರಾಮಯ್ಯ ಮಠಕ್ಕೆ ಭೇಟಿ ನೀಡಲಿದ್ದಾರಾ’ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದರು.

‘ಅಲ್ಲದೇ, ಮುಖ್ಯಮಂತ್ರಿಯವರು ಮಠಕ್ಕೆ ಬರುವ ಕಾರ್ಯಕ್ರಮ ಇಲ್ಲ ಎಂದು ಅವರ ಕಾರ್ಯದರ್ಶಿ ತಿಳಿಸಿದ್ದಾರೆ’  ಎಂದರು.

ADVERTISEMENT

‘ಮಠಕ್ಕೆ ಏಕೆ ಬರುತ್ತಿಲ್ಲ ಎಂದು ಅವರನ್ನೇ ಕೇಳಬೇಕು. ನಾವು ಯಾರಿಗೂ ಕೋಪ ಬರುವಂತಹ ಕೆಲಸ ಮಾಡಿಲ್ಲ. ಈ ಹಿಂದೆ ಮಂಗಳೂರು ಮತ್ತು ಬೆಂಗಳೂರಿನಲ್ಲಿ ನಡೆದ ಹಲವು ಕಾರ್ಯಕ್ರಮಗಳಲ್ಲಿ ಒಂದೇ ವೇದಿಕೆ ಹಂಚಿಕೊಂಡಿದ್ದೆವು. ಅವರು ಕಾಂಗ್ರೆಸ್ ಸೇರ್ಪಡೆಯಾದ ನಂತರ ನಡೆದ ಉಪ ಚುನಾವಣೆ ವೇಳೆಯಲ್ಲಿ ಮೈಸೂರಿನಲ್ಲಿ ನನ್ನನ್ನು ಭೇಟಿ ಮಾಡಿ ಆಶೀರ್ವಾದ– ಮಂತ್ರಾಕ್ಷತೆ ಪಡೆದುಕೊಂಡಿದ್ದರು. ಮುಖ್ಯಮಂತ್ರಿ ಆದ ಬಳಿಕ ಒಂದು ಬಾರಿಯೂ ಭೇಟಿ ಮಾಡಿಲ್ಲ’ ಎಂದು ಹೇಳಿದರು.

‘ಕನಕ ಗೋಪುರ ಎಂಬುದು ಹೊಸದಾಗಿ ಇಟ್ಟಿರುವ ಹೆಸರು. ಈಗಿನ ಕೃಷ್ಣಾಪುರ ಸ್ವಾಮೀಜಿ ಅವರ ಗುರುಗಳಾದ ವಿದ್ಯಾಪೂರ್ವ ತೀರ್ಥರು 1910 ರಲ್ಲಿ ಈ ಗೋಪುರ ನಿರ್ಮಾಣ ಮಾಡಿದ್ದರು. ಕನಕನಿಗೂ ಗೋಪುರಕ್ಕೂ ಯಾವುದೇ ಸಂಬಂಧ ಇಲ್ಲ. ಅದಮಾರು ಮಠದ ಸ್ವಾಮೀಜಿ ಕೆಲವು ವರ್ಷಗಳ ಹಿಂದೆ ಹೊಸದಾಗಿ ಗೋಪುರ ನಿರ್ಮಾಣ ಮಾಡಿ ಎಲ್ಲರಿಗೂ ಸಮಾಧಾನ ಆಗಲಿ ಎಂದು ‘ಕನಕ ಗೋಪುರ’ ಎಂದು ಹೆಸರಿಟ್ಟರು.

ಮಠದಲ್ಲಿ ಕನಕ ಮಂಟಪ, ಮೂರ್ತಿ ಇದೆ. ಕನಕ ಜಯಂತಿಯನ್ನೂ ಆಚರಣೆ ಮಾಡುತ್ತಿದ್ದೇವೆ. ಕನಕನಿಗೆ ಇಲ್ಲಿ ಯಾವುದೇ ರೀತಿಯಿಂದಲೂ ಅಪಚಾರವಾಗಿಲ್ಲ. ಆಗಿದೆ ಎಂದು ಅವರಿಗೆ ಅನಿಸಿದ್ದರೆ ತಿಳಿಸಬಹುದು’  ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಪರ್ಯಾಯ ಮತ್ತು ಮಧ್ವಾಚಾರ್ಯರ ಸಪ್ತಶತಮಾನೋತ್ಸವ ಸಮಾರಂಭಕ್ಕೂ ಆಹ್ವಾನ ನೀಡಿದ್ದೆ. ಇನ್ನೊಮ್ಮೆ ಬರುತ್ತೇನೆ ಎಂದು ಹೇಳಿದ್ದರೆ ಹೊರತು, ಬರುವುದಿಲ್ಲ ಎಂದು ಅವರು ಹೇಳಿಲ್ಲ.

ನಾನು ಪರ್ಯಾಯ ಪೀಠಕ್ಕೆ ಏರಿದ ಸಂದರ್ಭದಲ್ಲಿ ಅವರ ಪ್ರತಿನಿಧಿಗಳ ಮೂಲಕ ಕೃಷ್ಣನಿಗೆ ಕಾಣಿಕೆ ಕಳುಹಿಸಿಕೊಟ್ಟಿದ್ದರು. ಸಿದ್ದರಾಮಯ್ಯ ಅವರ ಪತ್ನಿ ಕರೆ ಮಾಡಿ ‘ಕಾಣಿಕೆ ಕಳುಹಿಸಿಕೊಟ್ಟಿದ್ದೇವೆ. ಈಗ ಬರಲು ಆಗುವುದಿಲ್ಲ, ಆದಷ್ಟು ಬೇಗ ಬರುತ್ತೇವೆ ಎಂದು ಹೇಳಿದ್ದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.