ADVERTISEMENT

ಷರೀಫ್ ವಿರುದ್ಧದ ಭ್ರಷ್ಟಾಚಾರ ವಿಚಾರಣೆಗೆ ಸುಪ್ರೀಂಕೋರ್ಟ್ ತಡೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2012, 19:30 IST
Last Updated 4 ಜುಲೈ 2012, 19:30 IST

ನವದೆಹಲಿ (ಪಿಟಿಐ): ರೈಲ್ವೆ ಖಾತೆ ಮಾಜಿ ಸಚಿವ ಸಿ.ಕೆ.ಜಾಫರ್ ಷರೀಫ್ ವಿರುದ್ಧದ ಭ್ರಷ್ಟಾಚಾರ ಪ್ರಕರಣದ ಕುರಿತು ಸಿಬಿಐ ವಿಶೇಷ ನ್ಯಾಯಾಲಯದ ವಿಚಾರಣೆಗೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಪಿ. ಸದಾಶಿವಂ ನೇತೃತ್ವದ ಪೀಠ ತಡೆಯಾಜ್ಞೆ ನೀಡಿದೆ.

ಷರೀಫ್ ಪರ ವಕೀಲರು ಮಾಡಿಕೊಂಡ ಮನವಿಯ ಹಿನ್ನೆಲೆಯಲ್ಲಿ ಎರಡು ವಾರದೊಳಗೆ ಉತ್ತರ ನೀಡುವಂತೆಯೂ ಪೀಠ ಸಿಬಿಐಗೆ ನೋಟಿಸ್ ನೀಡಿದೆ.  ರೈಲ್ವೆ ಸಚಿವರಾಗಿ ವಿದೇಶ ಪ್ರವಾಸದಲ್ಲಿ ತಮ್ಮಂದಿಗೆ ಖಾಸಗಿ ಸಿಬ್ಬಂದಿಯನ್ನು ಕರೆದೊಯ್ಯುವ ಅಧಿಕಾರವನ್ನು ಷರೀಫರು ಹೊಂದಿದ್ದರು ಎಂದು ವಾದಿಸಿದ್ದಾರೆ.

ಷರೀಫ್ 1995ರಲ್ಲಿ ಸರ್ಕಾರಿ ವೆಚ್ಚದಲ್ಲಿ ವಿದೇಶ ಪ್ರವಾಸ ಕೈಗೊಳ್ಳುವ ಮೂಲಕ ಸರ್ಕಾರಿ ಬೊಕ್ಕಸ ದುರ್ಬಳಕೆ ಮಾಡಿಕೊಂಡ ಪ್ರಕರಣದ ಕುರಿತು  ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಆ. 21ರಂದು ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ಮಂಗಳವಾರ ತಿಳಿಸಿದ್ದರು.

ರೈಲ್ವೆ ಸಚಿವರಾಗಿದ್ದಾಗ ಚಿಕಿತ್ಸೆಗಾಗಿ ಲಂಡನ್‌ಗೆ ತೆರಳಿದ್ದ ಷರೀಫ್ ತಮ್ಮ ಜತೆ ಆಪ್ತ ಕಾರ್ಯದರ್ಶಿ, ಶೀಘ್ರಲಿಪಿಕಾರರು ಹಾಗೂ ಚಾಲಕರನ್ನು ಸರ್ಕಾರಿ ವೆಚ್ಚದಲ್ಲೇ ಕರೆದೊಯ್ದಿದ್ದರು. ಇದರಿಂದ ಸರ್ಕಾರಕ್ಕೆ ರೂ. 7 ಲಕ್ಷ ನಷ್ಟವುಂಟಾಗಿತ್ತು ಎಂದು ಸಿಬಿಐ ಆರೋಪಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.