ADVERTISEMENT

ಸಂಕಷ್ಟದಲ್ಲಿ ನೆಡುತೋಪು ಸಿಬ್ಬಂದಿ, ಕಾರ್ಮಿಕರು

ಭದ್ರಾವತಿಯ ಮೈಸೂರು ಕಾಗದ ಕಾರ್ಖಾನೆ: 6 ತಿಂಗಳಿಂದ ಸಿಗದ ವೇತನ

ಚಂದ್ರಹಾಸ ಹಿರೇಮಳಲಿ
Published 10 ಜೂನ್ 2018, 19:30 IST
Last Updated 10 ಜೂನ್ 2018, 19:30 IST

ಶಿವಮೊಗ್ಗ: ಅವಸಾನದ ಹಾದಿ ಹಿಡಿದಿರುವ ಭದ್ರಾವತಿಯ ಮೈಸೂರು ಕಾಗದ ಕಾರ್ಖಾನೆಗೆ ಕಚ್ಚಾ ಸಾಮಗ್ರಿ ಪೂರೈಸಲು ಮೀಸಲಿಟ್ಟಿದ್ದ ನೆಡುತೋಪುಗಳಲ್ಲಿ ಕೆಲಸ ಮಾಡುವ ಕಾರ್ಖಾನೆಯ ಅರಣ್ಯ ವಿಭಾಗದ ಸಿಬ್ಬಂದಿ ಹಾಗೂ ಕಾರ್ಮಿಕರು ಆರು ತಿಂಗಳಿನಿಂದ ವೇತನವಿಲ್ಲದೆ ಸಂಕಷ್ಟ ಎದುರಿಸುತ್ತಿದ್ದಾರೆ.

ಇತ್ತ ಕಾರ್ಖಾನೆಯ ನೆಡುತೋಪುಗಳನ್ನು ದೊಡ್ಡ ಪ್ರಮಾಣದಲ್ಲಿ ಒತ್ತುವರಿ ಮಾಡಲು ಕೆಲವು ಪಟ್ಟಭದ್ರರು ಸಿದ್ಧತೆ ನಡೆಸಿದ್ದಾರೆ. ಅದಕ್ಕೆ ಪೂರ್ವಭಾವಿಯಾಗಿ ಬಯಲು ಸೀಮೆಯಿಂದ ನೆಡುತೋಪುಗಳಲ್ಲಿ ಕೆಲಸ ಮಾಡಲು ಬಂದು, ಅಲ್ಲೇ ನೆಲೆ ನಿಂತಿರುವ ಹಲವು ಕಾರ್ಮಿಕ ಕುಟುಂಬಗಳನ್ನು ಒಕ್ಕಲೆಬ್ಬಿಸುವ ತಂತ್ರಗಾರಿಕೆ ಸದ್ದಿಲ್ಲದೇ ನಡೆಯುತ್ತಿದೆ.

1936ರಲ್ಲಿ ಸ್ಥಾಪನೆಯಾದ ಎಂಪಿಎಂನಲ್ಲಿ ನ್ಯೂಸ್‌ಪ್ರಿಂಟ್ ಸೇರಿದಂತೆ ಹಲವು ಕಾಗದದ ಉತ್ಪನ್ನಗಳನ್ನು ಉತ್ಪಾದಿಸಲು ಅಗತ್ಯವಾದ ಮರದ ತಿರುಳಿಗಾಗಿ ನೆಡುತೋಪು ಬೆಳೆಸಲು ರಾಜ್ಯ ಸರ್ಕಾರ 30 ಸಾವಿರ ಹೆಕ್ಟೇರ್ ಅರಣ್ಯ ಭೂಮಿ ಮಂಜೂರು ಮಾಡಿತ್ತು. ಒತ್ತುವರಿ ಪರಿಣಾಮ ಈ ವಿಸ್ತಾರ 26 ಸಾವಿರ ಹೆಕ್ಟೇರ್‌ಗೆ ಇಳಿದಿದೆ. ಅಲ್ಲಿ ಕಾಗದ ಉತ್ಪಾದನೆಗೆ ಅಗತ್ಯವಾದ ವಿವಿಧ ಜಾತಿಯ ಮರಗಳನ್ನು ಬೆಳೆಸಿ, ನಿಯಮಿತವಾಗಿ ಕಟಾವು ಮಾಡಲಾಗುತ್ತಿದೆ.

ADVERTISEMENT

ನೆಡುತೋಪುಗಳಲ್ಲಿ ಸಸಿಗಳನ್ನು ನೆಟ್ಟು, ಜನ–ಜಾನುವಾರುಗಳಿಂದ ರಕ್ಷಿಸುವ, ಬೇಸಿಗೆಯಲ್ಲಿ ನೀರುಣಿಸಿ, ಆರೈಕೆ ಮಾಡಲು ಕಾರ್ಖಾನೆಯ ಅರಣ್ಯ ವಿಭಾಗದಲ್ಲಿ ಪ್ರಸ್ತುತ 374 ಸಿಬ್ಬಂದಿ ಇದ್ದಾರೆ. ಬಾಗಿಲು ಮುಚ್ಚಿರುವ ಕಾರ್ಖಾನೆಯ ಎಲ್ಲ ನೌಕರರಿಗೂ ರಾಜ್ಯ ಸರ್ಕಾರ ಸ್ವಯಂ ನಿವೃತ್ತಿ ಯೋಜನೆ ಜಾರಿಗೆ ತಂದಿದೆ.

ಆದರೆ, ಎಂಪಿಎಂಗೆ ನೀಡಿರುವ ನೆಡುತೋಪುಗಳ ಗುತ್ತಿಗೆ ಅವಧಿ 2021ರವರೆಗೆ ಇದ್ದು, ಇನ್ನೂ ಮೂರು ವರ್ಷ ಮರಗಳನ್ನು ಬೆಳೆಸಲು ಸಿಬ್ಬಂದಿಯ ಅಗತ್ಯ ಇರುವ ಕಾರಣ ಅರಣ್ಯ ವಿಭಾಗದ ನೌಕರರಿಗೆ ಸ್ವಯಂ ನಿವೃತ್ತಿ ಯೋಜನೆಗೆ ಅವಕಾಶ ಕಲ್ಪಿಸಿಲ್ಲ.

ನೆಡುತೋಪುಗಳಲ್ಲಿ ಬೆಳೆಸಿದ ಮರಗಳನ್ನು ಕಟಾವು ಮಾಡಿದ ನಂತರ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮಕ್ಕೆ ಮಾರಾಟ ಮಾಡಲಾಗುತ್ತಿದೆ. ಇದರಿಂದ ವಾರ್ಷಿಕ ಸರಾಸರಿ ₹ 100 ಕೋಟಿ ಆದಾಯ ಬರುತ್ತಿದೆ. ಈ ಹಣವನ್ನೇ ನಿವೃತ್ತಿ ಯೋಜನೆಯ ಸೌಲಭ್ಯ ಪಡೆದ ಕಾರ್ಖಾನೆಯ ಉಳಿದ ನೌಕರರಿಗೆ ನೀಡಲು ಬಳಸಿಕೊಳ್ಳಲಾಗುತ್ತಿದೆ. ಆದರೆ, ನೆಡುತೋಪು ನೋಡಿಕೊಳ್ಳುವ ಅರಣ್ಯ ವಿಭಾಗದ ಸಿಬ್ಬಂದಿಗೆ ಮಾತ್ರ ವೇತನ ನೀಡದೇ ಸಂಕಷ್ಟಕ್ಕೆ ದೂಡಲಾಗಿದೆ. ‘ಡಿಸೆಂಬರ್‌ನಿಂದ ವೇತನ ನೀಡಿಲ್ಲ. ನಿತ್ಯದ ಬದುಕು ನಡೆಸುವುದೇ ದುಸ್ತರವಾಗಿದೆ. ಈ ತಿಂಗಳು ಮಕ್ಕಳನ್ನು ಶಾಲೆ, ಕಾಲೇಜಿಗೆ ಸೇರಿಸಲು ಅವರು ಪಟ್ಟ ಸಂಕಷ್ಟ ಮಾತುಗಳಲ್ಲಿ ಹೇಳಲು ಸಾಧ್ಯವಿಲ್ಲ. ತಕ್ಷಣವೇ ಸರ್ಕಾರ ಅವರಿಗೆ ವೇತನ ನೀಡಬೇಕು. ನೆಡುತೋಪು ಭೂಮಿ ಉಳಿಸಲು ಕಾರ್ಪೊರೇಷನ್‌ ಮಾದರಿಯ ಸಂಸ್ಥೆ ಸ್ಥಾಪಿಸಬೇಕು’ ಎಂದು ಒತ್ತಾಯಿಸುತ್ತಾರೆ ಎಂಪಿಎಂ ಸಾರ್ವಜನಿಕ ಸಂಪರ್ಕಾಧಿಕಾರಿ ಜಗನ್ನಾಥ ಬಂಗೇರ.

ಕಾರ್ಮಿಕರ ಒಕ್ಕಲೆಬ್ಬಿಸಲು ಸಂಚು:

ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ, ಶಿಕಾರಿಪುರ, ಸಾಗರ, ಶಿವಮೊಗ್ಗ ಗ್ರಾಮಾಂತರ ಭಾಗಗಳಲ್ಲಿ ಹೆಚ್ಚಿನ ಸಂಖ್ಯೆಯ ನೆಡುತೋಪುಗಳಿವೆ. ಈ ನೆಡುತೋಪುಗಳಲ್ಲಿ ಬೆಳೆದ ಮರಗಳನ್ನು ಕಟಾವು ಮಾಡುವ ಸಮಯದಲ್ಲಿ ಗುತ್ತಿಗೆದಾರರು ಬಯಲುಸೀಮೆಯ ವಿವಿಧ ಜಿಲ್ಲೆಗಳಿಂದ ಕೂಲಿ ಕಾರ್ಮಿಕರನ್ನು ಕರೆತರುತ್ತಾರೆ.

ಕುಟುಂಬ ಸಮೇತ ಬರುವ ಈ ಕೂಲಿಕಾರ್ಮಿಕರಲ್ಲಿ ಹಲವರು ಅಲ್ಲೇ ನೆಲೆ ನಿಂತಿದ್ದಾರೆ. ಕೆಲವು ಕುಟುಂಬಗಳು ಸ್ವಾತಂತ್ರ್ಯ ಪೂರ್ವದಿಂದಲೂ ನೆಲೆ ನಿಂತಿವೆ. ಆದರೆ, ಅವರಿಗೆ ಸೂರು ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳಿಲ್ಲ. ಬಹುತೇಕ ಮಕ್ಕಳು ಶಾಲೆಯ ಮೆಟ್ಟಿಲು ಏರಿಲ್ಲ. ಈಗ ಎಂಪಿಎಂ ಅವಸಾನದತ್ತ ಸಾಗಿರುವ ಕಾರಣ ಈ ನೆಡುತೋಪು ಕಬಳಿಸಲು ಮುಂದಾಗಿರುವ ಸ್ಥಳೀಯ ಹಿತಾಸಕ್ತಿಗಳು ಅಲ್ಲಿಂದ ಒಕ್ಕಲೆಬ್ಬಿಸಲು ಮುಂದಾಗಿವೆ.

ಎಲ್ಲ ಉತ್ಪಾದನೆಯೂ ಸ್ಥಗಿತ

ಶ್ರೇಷ್ಠ ಗುಣಮಟ್ಟದ ಕಾಗದ ಉತ್ಪಾದನೆಯ ಜತೆಗೆ, ಸಕ್ಕರೆ, ವಿದ್ಯುತ್ ಉತ್ಪಾದನೆ ಸೇರಿದಂತೆ ಬಹುಪಯೋಗದ ಈ ಕಾರ್ಖಾನೆ ದೇಶ, ವಿದೇಶಗಳಲ್ಲೂ ಖ್ಯಾತಿ ಪಡೆದಿತ್ತು. ಒಂದೂವರೆ ದಶಕಗಳಿಂದ ನಷ್ಟದ ಹಾದಿಯಲ್ಲಿ ಸಾಗಿದ್ದು, ಒಂದು ವರ್ಷದಿಂದ ಎಲ್ಲ ಉತ್ಪಾದನೆಗಳನ್ನು ಸ್ಥಗಿತಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.