ADVERTISEMENT

`ಸಂದರ್ಶನ'ಕ್ಕೆ ತಡೆ: ಕೋರ್ಟ್ ಅಸ್ತು

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2013, 19:59 IST
Last Updated 4 ಏಪ್ರಿಲ್ 2013, 19:59 IST

ಬೆಂಗಳೂರು: ಶಾಲೆಗಳಲ್ಲಿ ಮಕ್ಕಳಿಗೆ ಪ್ರವೇಶ ನೀಡುವ ಸಂದರ್ಭದಲ್ಲಿ ಪಾಲಕರನ್ನು ನಾನಾ ಬಗೆಯ ಪರೀಕ್ಷೆಗಳಿಗೆ ಒಡ್ಡಬಾರದು ಎಂಬುದೂ ಸೇರಿದಂತೆ ವಿವಿಧ ನಿಯಮಗಳನ್ನು ರೂಪಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಹೊರಡಿಸಿದ್ದ ಸುತ್ತೋಲೆಯನ್ನು ಹೈಕೋರ್ಟ್ ಎತ್ತಿಹಿಡಿದಿದೆ.

ಈ ಸುತ್ತೋಲೆ ಪ್ರಶ್ನಿಸಿ ಕರ್ನಾಟಕ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ (ಕುಸ್ಮಾ) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಬಿ.ಎಸ್. ಪಾಟೀಲ, ಈ ಕುರಿತು ಪ್ರಮಾಣಪತ್ರ ಸಲ್ಲಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ನಿರ್ದೇಶನ ನೀಡಿದ್ದರು.

`ಕಡ್ಡಾಯ ಶಿಕ್ಷಣ ಹಕ್ಕು (ಆರ್‌ಟಿಇ) ಕಾಯ್ದೆಯ ಸೆಕ್ಷನ್ 13(1)ರ ಅನ್ವಯ, ಪ್ರವೇಶ ನೀಡುವ ಸಂದರ್ಭದಲ್ಲಿ ಮಕ್ಕಳನ್ನು ಅಥವಾ ಪಾಲಕರನ್ನು ಪರೀಕ್ಷೆಗೆ ಒಳಪಡಿಸುವುದನ್ನು ನಿಷೇಧಿಸಿ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ 2010ರ ನವೆಂಬರ್ 23ರಂದು ನಿಯಮಾವಳಿ ರೂಪಿಸಿದೆ. ಕಾಯ್ದೆಯ ಅನ್ವಯ, ಮಕ್ಕಳಿಗೆ ಪ್ರವೇಶ ನೀಡುವಾಗ ಶಾಲೆಗಳು ಪಾರದರ್ಶಕ ನಿಯಮ ಅನುಸರಿಸಬೇಕು' ಎಂದು ಆಯುಕ್ತರು ಗುರುವಾರ ಪ್ರಮಾಣಪತ್ರ ಸಲ್ಲಿಸಿದರು.

ವಿವಿಧ ಸಾಮಾಜಿಕ ಹಾಗೂ ಆರ್ಥಿಕ ಹಿನ್ನೆಲೆಯ ವಿದ್ಯಾರ್ಥಿಗಳು ಒಂದೇ ತರಗತಿಯಲ್ಲಿ ಇದ್ದಾಗ, ಅಲ್ಲಿ ಸೃಜನಶೀಲತೆಗೆ ಹೆಚ್ಚಿನ ಅವಕಾಶ ಇರುತ್ತದೆ. ಒಂದೇ ಹಿನ್ನೆಲೆಯ ವಿದ್ಯಾರ್ಥಿಗಳನ್ನು ಹೊಂದಿರುವ ತರಗತಿಗಳಲ್ಲಿ ಇದು ಆಗದು. ವಿವಿಧ ಸಾಮಾಜಿಕ ಹಿನ್ನೆಲೆಯ ವಿದ್ಯಾರ್ಥಿಗಳು ಒಟ್ಟಾಗಿ ಕಲಿಯುವ ಅವಕಾಶ ಲಭ್ಯವಾಗಬೇಕು ಎಂಬ ಆಶಯಕ್ಕೆ ಈ ನಿಯಮ ಪೂರಕವಾಗಿವೆ. ಆರ್‌ಟಿಇ ಕಾಯ್ದೆಯ ವ್ಯಾಪ್ತಿಗೆ ಒಳಪಡದ ಶೇಕಡ 75ರಷ್ಟು ಸೀಟುಗಳನ್ನು, ಖಾಸಗಿ ಶಾಲೆಗಳು ಪಾರದರ್ಶಕ ವ್ಯವಸ್ಥೆಯೊಂದರ ಮೂಲಕ ಭರ್ತಿ ಮಾಡಬೇಕು ಎಂಬುದೂ ಸರ್ಕಾರದ ಆಶಯ ಎಂದು ವಿವರಿಸಿದರು.

ಶೇ 75ರಷ್ಟು ಸೀಟುಗಳನ್ನು ಭರ್ತಿ ಮಾಡಲು, ಖಾಸಗಿ ಶಾಲೆಗಳು ಸ್ಪಷ್ಟ ನಿಯಮಾವಳಿ ರೂಪಿಸಬೇಕು. ಆ ನಿಯಮಾವಳಿಯು ಸಾರ್ವಜನಿಕರಿಗೆ ತಿಳಿಯುವಂತೆ ವ್ಯವಸ್ಥೆ ಮಾಡಬೇಕು. ಇಲಾಖೆ ಹೊರಡಿಸಿರುವ ಸುತ್ತೋಲೆಯಲ್ಲಿ ಅಸ್ಪಷ್ಟತೆ ಇಲ್ಲ. ಇದು ಕೇಂದ್ರ ಸರ್ಕಾರ ರೂಪಿಸಿರುವ ನಿಯಮಗಳಿಗೆ ಅನುಗುಣವಾಗಿಯೇ ಇದೆ ಎಂದು ಪ್ರಮಾಣಪತ್ರದಲ್ಲಿ ವಿವರಿಸಲಾಗಿದೆ. ಇದನ್ನು ದಾಖಲು ಮಾಡಿಕೊಂಡ ನ್ಯಾಯಪೀಠ, ಅರ್ಜಿ ಇತ್ಯರ್ಥಪಡಿಸಿತು. ವಕೀಲ ಆರ್. ಓಂಕುಮಾರ್ ಸರ್ಕಾರದ ಪರ ವಾದಿಸಿದ್ದರು.

`ಖಾಸಗಿ ಅನುದಾನರಹಿತ ಶಾಲೆಗಳು ವಂತಿಗೆ ಸಂಗ್ರಹಿಸಬಾರದು. ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಪಾರದರ್ಶಕ ವ್ಯವಸ್ಥೆಯೊಂದರ ಮೂಲಕ ಪ್ರವೇಶ ನೀಡಬೇಕು' ಎಂದು ಮಾರ್ಚ್ 12ರಂದು ಸರ್ಕಾರ ಹೊರಡಿಸಿರುವ ಸುತ್ತೋಲೆಯಲ್ಲಿ ಹೇಳಲಾಗಿದೆ.

`ಸರ್ಕಾರ ಹೊರಡಿಸಿರುವ ಸುತ್ತೋಲೆ ಮೇಲ್ನೋಟಕ್ಕೆ ಅಸಾಂವಿಧಾನಿಕ ಮತ್ತು ಅಕ್ರಮ. ಈ ಸುತ್ತೋಲೆಗೆ ತಡೆ ನೀಡದಿದ್ದರೆ, ಮಕ್ಕಳಿಗೆ ಪ್ರವೇಶ ನೀಡುವ ಖಾಸಗಿ ಶಾಲೆಗಳ ಹಕ್ಕನ್ನು ಕಿತ್ತುಕೊಂಡಂತೆ ಆಗುತ್ತದೆ. ಈ ಸುತ್ತೋಲೆಯನ್ನು ರದ್ದು ಮಾಡಬೇಕು' ಎಂದು `ಕುಸ್ಮಾ' ವಾದಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.