ADVERTISEMENT

ಸಂಭ್ರಮದ ಮೇಲುಕೋಟೆ ವೈರಮುಡಿ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2014, 19:30 IST
Last Updated 13 ಮಾರ್ಚ್ 2014, 19:30 IST

ಮಂಡ್ಯ: ಜಿಲ್ಲೆಯ ಮೇಲುಕೋಟೆಯಲ್ಲಿ ಚಲುವ­ನಾರಾ­ಯಣಸ್ವಾಮಿಯ ವಿಶ್ವವಿಖ್ಯಾತ ವೈರಮುಡಿ ಉತ್ಸವದ ಸಂಭ್ರಮಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾದರು.

ಭಗವಂತನ ಕಿರೀಟವೆಂದೇ ಕರೆಯಲಾಗುವ ವಜ್ರಖಚಿತ ವೈರಮುಡಿ ಕಿರೀಟವನ್ನು ಧರಿಸಿದ ಚಲುವ­ನಾರಾಯಣ­ಸ್ವಾಮಿಯ ದರ್ಶನ ಪಡೆದು ಪುನೀತರಾದರು. ಭಕ್ತರ ಸಂಭ್ರಮ, ಸಡಗರ ಮುಗಿಲು ಮುಟ್ಟಿತು.

ಬೆಳಿಗ್ಗೆ ಮಂಡ್ಯದಿಂದ ಬಿಗಿಭದ್ರತೆಯಲ್ಲಿ ತರಲಾದ ಕಿರೀಟ ಹಾಗೂ ಇನ್ನಿತರ ಆಭರಣಗಳನ್ನು ಪಾರ್ವತಿ ಮಂಟಪದಿಂದ ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆಯಲ್ಲಿ ತರಲಾಯಿತು. ನಂತರ ಆಭರಣಗಳನ್ನು ಸ್ಥಾನಿಕರಿಗೆ ಹಸ್ತಾಂತರಿಸಲಾಯಿತು.

ದೇವಸ್ಥಾನದ ಸ್ಥಾನಿಕರು ಸ್ವಾಮಿಯನ್ನು ಅಲಂಕರಿಸಿದರು. ರಾತ್ರಿ ಯಾಗಶಾಲೆಯಲ್ಲಿ ಮತ್ತು ಗರುಡದೇವನ ಮೆರವಣಿಗೆ ನಂತರ ಬ್ರಹ್ಮೋತ್ಸವಕ್ಕೆ ಚಾಲನೆ ನೀಡಲಾಯಿತು.

ವಜ್ರದ ಕಿರೀಟ ಧರಿಸಿದ ಚಲುವನಾರಾಯಣಸ್ವಾಮಿಯು ಹೂವಿನಿಂದ ಅಲಂಕೃತವಾದ ಪಲ್ಲಕ್ಕಿಯಲ್ಲಿ ರಾಜಬೀದಿಗೆ ಬರುತ್ತಿದ್ದಂತೆಯೇ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಗೋವಿಂದಾ... ಗೋವಿಂದಾ ಎನ್ನುವ ಭಕ್ತರ ಕೂಗು ಜೋರಾಯಿತು.

ರಾಜ್ಯದ ವಿವಿಧೆಡೆಗಳಿಂದಷ್ಟೇ ಅಲ್ಲದ ತಮಿಳುನಾಡು, ಆಂಧ್ರಪ್ರದೇಶ, ಕೇರಳದಿಂದಲೂ ಭಕ್ತರು ಆಗಮಿಸಿದ್ದರು .
ಮಂಟಪ, ದೇವಸ್ಥಾನದ ರಾಜಬೀದಿಗಳನ್ನು ವಿದ್ಯುತ್‌ ದೀಪ ಗಳಿಂದ ಅಲಂಕರಿಸಲಾಗಿತ್ತು. ಉತ್ಸವ ವೀಕ್ಷಣೆಗೆ ಅನುಕೂಲ­ವಾಗಲಿ ಎಂದು ಅಲ್ಲಲ್ಲಿ ಎಲ್‌ಸಿಡಿಗಳನ್ನು ಅಳವಡಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.