ADVERTISEMENT

ಸಂಯಮೀಂದ್ರ ತೀರ್ಥರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ

2016ರ ಮಾರ್ಚ್‌ 26ರಂದು ನಡೆದಿದ್ದ ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಬಾಳಿಗಾ ಹತ್ಯೆ ಪ್ರಕರಣ

ಬಿ.ಎಸ್.ಷಣ್ಮುಖಪ್ಪ
Published 5 ಜೂನ್ 2017, 19:30 IST
Last Updated 5 ಜೂನ್ 2017, 19:30 IST
ಸಂಯಮೀಂದ್ರ
ಸಂಯಮೀಂದ್ರ   

ಬೆಂಗಳೂರು: ‘ಶ್ರೀಯುತ ಉಮೇಶ್‌ ಮಲ್ಯ ಉರುಫ್‌ ಸಂಯಮೀಂದ್ರ ತೀರ್ಥ ಸ್ವಾಮೀಜಿಗಳೇ ಇನ್ನಾದರೂ ನನ್ನ ಪತ್ರಕ್ಕೆ ಉತ್ತರಿಸಿ...’
‘ಈ ರೀತಿಯ ಸಂಬೋಧನೆಯೇ ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಬಾಳಿಗಾ ಹತ್ಯೆಗೆ ಕಾರಣವಾಯ್ತು. ಇವನನ್ನು  ಹೀಗೇ ಬಿಟ್ಟರೆ ಮಠದ ಒಳಗಿನ ವ್ಯವಹಾರಗಳನ್ನು  ಬಯಲಿಗೆ ಎಳೆಯುತ್ತಾನೆ ಎಂಬ ಭೀತಿಯಿಂದ ನನ್ನ ತಮ್ಮನನ್ನು ಸ್ವಾಮೀಜಿ ಮತ್ತು ಅವರ ಗುಂಪು ನರೇಶ್‌ ಶೆಣೈಗೆ ₹ 30 ಲಕ್ಷ  ಸುಪಾರಿ ಕೊಟ್ಟು  ಹತ್ಯೆ ಮಾಡಿಸಿದೆ’ ಎಂದು ವಿನಾಯಕ ಬಾಳಿಗಾ ಅವರ ತಂಗಿ ಅನೂರಾಧಾ  ಬಾಳಿಗಾ ಆರೋಪಿಸಿದ್ದಾರೆ.

‘ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಕಾಶಿಮಠದ  ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರನ್ನೂ ತನಿಖೆಗೆ ಒಳಪಡಿಸಬೇಕು’ ಎಂದು ಕೋರಿ ಮಂಗಳೂರಿನ ಮೂರನೇ ಹೆಚ್ಚುವರಿ ಮ್ಯಾಜಿಸ್ಟ್ರೇಟ್  ಕೋರ್ಟ್‌ನಲ್ಲಿ ಮಧ್ಯಂತರ ಅರ್ಜಿ  ಸಲ್ಲಿಸಿದ್ದಾರೆ.
ಅರ್ಜಿಯಲ್ಲಿ 14 ಜನರನ್ನು ಹೆಸರಿಸಲಾಗಿದೆ. ‘ಇವರೆಲ್ಲರನ್ನೂ ಮರು ತನಿಖೆಗೆ ಒಳಪಡಿಸಬೇಕು. ಹತ್ಯೆ ಸಂಚಿನಲ್ಲಿ ಇವರ ವಿರುದ್ಧ ಬಹಳಷ್ಟು ಸಾಕ್ಷ್ಯಾಧಾರಗಳಿದ್ದು, ಎಲ್ಲರ ವಿರುದ್ಧ  ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಕೋರಲಾಗಿದೆ.

‘ಸ್ವಾಮೀಜಿ ದೇವಮಾನವನಂತೆ ವರ್ತಿಸುತ್ತಿದ್ದಾರೆ. ತಮ್ಮ ಹಣ ಬಲದಿಂದ ಪೊಲೀಸ್‌ ತನಿಖೆ ಮೇಲೆ ಪ್ರಭಾವ ಬೀರುತ್ತಿದ್ದಾರೆ’ ಎಂದು ಆರೋಪಿಸಲಾಗಿದೆ.

ADVERTISEMENT

ಸಂಯಮೀಂದ್ರ ತೀರ್ಥ ಸ್ವಾಮೀಜಿ, ಜಗನ್ನಾಥ ಕಾಮತ್ (ಲೆಕ್ಕ ಪರಿಶೋಧಕ), ವಿಘ್ನೇಶ್ ನಾಯಕ್ ಮತ್ತು ಚೇತನ ಕಾಮತ್, ಸುರೇಶ್ ಕಾಮತ್, ಜಿ.ವಿ.ಕಾಮತ್ (ಉದ್ಯಮಿಗಳು), ಸಿ.ಎಲ್‌.ಶೆಣೈ (ನಿವೃತ್ತ ಬ್ಯಾಂಕ್‌ ಉದ್ಯೋಗಿ), ರವೀಂದ್ರ ನಿಕ್ಕಂ (ಚಿನ್ನದ ವ್ಯಾಪಾರಿ), ವೇದವ್ಯಾಸ ಕಾಮತ್, ವಿಶ್ವನಾಥ ಭಟ್‌,  ಹನುಮಂತ ಕಾಮತ್, ಕಾರ್ಕಳದ ರಾಧಾಮಾಧವ ಶೆಣೈ, ಬೆಂಗಳೂರಿನ ಕೆ.ನಾರಾಯಣ ಶೆಣೈ (ಮಲ್ಲೇಶ್ವರದಲ್ಲಿರುವ ಶಾಖಾ ಮಠದ ಕಾರ್ಯದರ್ಶಿ) ಹಾಗೂ ಬಂಟ್ವಾಳದ ವಿಜಯಾನಂದ ಶೆಣೈ (ಸ್ವಾಮೀಜಿ ಕಾರು ಚಾಲಕ) ಅವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

‘ಕಾಶಿಮಠ ಸಂಸ್ಥಾನಕ್ಕೆ ಸೇರಿದ ಮಂಗಳೂರಿನ ವೆಂಕಟರಮಣ ದೇವಸ್ಥಾನದ ಪುನರುಜ್ಜೀವನ ಕಾಮಗಾರಿಯಲ್ಲಿ  ಕೋಟ್ಯಂತರ ಮೊತ್ತದ ಅವ್ಯವಹಾರ ನಡೆದಿದೆ. ಇದರ  ಬಗ್ಗೆ ಲೆಕ್ಕ ಪರಿಶೋಧನೆ ಮಾಡಿಸಬೇಕು ಎಂದು ಕೋರಿದ್ದೇ ವಿನಾಯಕ ಬಾಳಿಗಾ ಹತ್ಯೆ ಕಾರಣ’ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

‘ಹಣಕಾಸಿನ ವಿವರಗಳು ಹೊರಬಂದರೆ ಸ್ವಾಮೀಜಿ ಮತ್ತು ಅವರ ಪಟಾಲಂನ ಅಕ್ರಮಗಳೂ ಬಯಲಾಗುತ್ತವೆ ಎಂಬ ಭೀತಿಯಲ್ಲಿ ಹತ್ಯೆಗೆ ಸಂಚು ರೂಪಿಸಲಾಗಿತ್ತು’ ಎಂಬುದು ಅನೂರಾಧ ದೂರು.

ಇದೇ 26ರಂದು ಈ ಅರ್ಜಿ ವಿಚಾರಣೆಗೆ ಬರಲಿದೆ. ವಿನಾಯಕ ಬಾಳಿಗಾ ಅವರನ್ನು ಮಂಗಳೂರಿನಲ್ಲಿ 2016ರ ಮಾರ್ಚ್‌ 21ರಂದು ಹತ್ಯೆ ಮಾಡಲಾಗಿತ್ತು.

ಗೌಡ ಸಾರಸ್ವತ ಬ್ರಾಹ್ಮಣರ ಕಾಶಿಮಠ

ಕಾಶಿಮಠದ ಅನುಯಾಯಿಗಳು ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು. ಇವರಿಗೆ ಮೂರು ಮುಖ್ಯ ಮಠಗಳಿವೆ.
ಗೋವಾದಲ್ಲಿರುವ ಕೈವಲ್ಯ ಮಠ (ಕವಳೆ ಮಠ), ಗೋಕರ್ಣ ಸಮೀಪದ ಪರ್ತಗಾಳಿ ಮಠ ಹಾಗೂ ವಾರಾಣಸಿಯಲ್ಲಿರುವ ಕಾಶಿಮಠ. ಇದಕ್ಕೆ ದೇಶದಾದ್ಯಂತ 36 ಶಾಖಾಮಠಗಳಿದ್ದು ಅದರಲ್ಲಿ ಮಂಗಳೂರಿನ ಕಾಶಿಮಠವೂ ಒಂದು.

ಸ್ವಾಮೀಜಿ ಫೋನ್‌ನಲ್ಲಿ ಮಾತನಾಡಲ್ಲ...

ಪ್ರಕರಣ ಕುರಿತಂತೆ ಸಂಯಮೀಂದ್ರ ತೀರ್ಥರ ಪ್ರತಿಕ್ರಿಯೆ ಪಡೆಯಲು ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, ಸ್ವಾಮೀಜಿ ತಿರುಮಲದಲ್ಲಿ ಇದ್ದಾರೆ ಎಂಬುದೂ ತಿಳಿದು ಬಂತು.

ಸ್ವಾಮೀಜಿ ಜೊತೆಯಲ್ಲಿದ್ದ ನಾರಾಯಣ ಶೆಣೈ, ‘ಮಠದ ಸಂಸ್ಕಾರದ ಪ್ರಕಾರ ಸ್ವಾಮೀಜಿ ಫೋನಿನಲ್ಲಿ ಮಾತನಾಡುವುದಿಲ್ಲ. ಈ ಕುರಿತಂತೆ ಕೋರ್ಟ್‌ ಏನು ತೀರ್ಮಾನ ಕೈಗೊಳ್ಳುತ್ತದೆಯೊ ಅದಕ್ಕೆ ನಾವು ಬದ್ಧ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.