ADVERTISEMENT

ಸಂಸದೆ ಶೋಭಾ ಕರಂದ್ಲಾಜೆ ಕಾರ್ಯವ್ಯಾಪ್ತಿ ಮೊಟಕು !

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2018, 19:30 IST
Last Updated 31 ಮಾರ್ಚ್ 2018, 19:30 IST
ಶೋಭಾ ಕರಂದ್ಲಾಜೆ
ಶೋಭಾ ಕರಂದ್ಲಾಜೆ   

ಬೆಂಗಳೂರು: ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಸಂಸದೆ ಶೋಭಾ ಕರಂದ್ಲಾಜೆ ಕಾರ್ಯವ್ಯಾಪ್ತಿ ಮೊಟಕುಗೊಳಿಸುವ ಮೂಲಕ ಪಕ್ಷದಲ್ಲಿದ್ದ ಅಸಮಾಧಾನ ಹೋಗಲಾಡಿಸುವ ಯತ್ನವನ್ನು ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್‌ ಜಾವಡೇಕರ್ ಮಾಡಿದ್ದಾರೆ.

ಮಾಧ್ಯಮಗೋಷ್ಠಿ ನಡೆಸಿ ರಾಜ್ಯ ಸರ್ಕಾರದ ಹಗರಣಗಳನ್ನು ಪ್ರಸ್ತಾಪಿಸುವುದು, ಹಿಂದುತ್ವದ ವಿಚಾರಗಳನ್ನು ಮುನ್ನೆಲೆಗೆ ತಂದು ಪಕ್ಷಕ್ಕೆ ಅನುಕೂಲ ಮಾಡುವ ಕೆಲಸವನ್ನಷ್ಟೇ ಶೋಭಾಗೆ ವಹಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಬಿ.ಎಸ್‌.ಯಡಿಯೂರಪ್ಪ ಅವರ ಉತ್ತರಾಧಿಕಾರಿ ಎಂಬ ರೀತಿಯಲ್ಲಿ ಬಿಂಬಿಸಿಕೊಳ್ಳುವುದು ಮತ್ತು ಪಕ್ಷದ ಎಲ್ಲಾ ಚಟುವಟಿಕೆಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಶೋಭಾ ನಡೆಯ ಬಗ್ಗೆ ಹಲವು ಹಿರಿಯ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ ನೇತೃತ್ವದಲ್ಲಿ ಪ್ರಮುಖ ನಾಯಕರು ಈ ಸಂಬಂಧ ವರಿಷ್ಠರಿಗೆ ದೂರು ನೀಡಿದ್ದರು. ಯಡಿಯೂರಪ್ಪ ಆಪ್ತ ವಲಯದಲ್ಲಿ ಗುರುತಿಸಿಕೊಂಡ
ವರು ಕೂಡಾ ಶೋಭಾ ವರ್ತನೆಯ ಬಗ್ಗೆ ಪಕ್ಷದ ವೇದಿಕೆಯಲ್ಲಿ ಅಸಮಾಧಾನ ತೋಡಿಕೊಂಡಿದ್ದರು. ಆದರೆ, ಅವರು ಬಹಿರಂಗವಾಗಿ ಹೇಳಿಕೆ ನೀಡುವ ಧೈರ್ಯ ತೋರಿರಲಿಲ್ಲ.

ADVERTISEMENT

‘ಶೋಭಾ ‍ಪ್ರಭಾವ ಹಾಗೂ ಹಸ್ತಕ್ಷೇಪಕ್ಕೆ ತಡೆಹಾಕದೇ ಇದ್ದರೆ ಚುನಾವಣೆ ಸಂದರ್ಭದಲ್ಲಿ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ಪ್ರಕಾಶ್‌ ಜಾವಡೇಕರ್‌, ಶೋಭಾಗೆ ನಿರ್ಬಂಧ ಹೇರಿದ್ದಾರೆ. ಹೀಗಾಗಿ, 2017ರ ಡಿಸೆಂಬರ್‌ ಬಳಿಕ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಹಲವು ಬಾರಿ ಭೇಟಿ ನೀಡಿದರೂ ಯಾವ ಕಾರ್ಯಕ್ರಮದಲ್ಲಿಯೂ ಶೋಭಾ ಕಾಣಿಸಿಕೊಂಡಿರಲಿಲ್ಲ. ತಮಗೆ ವಹಿಸಿದ ಕೆಲಸವನ್ನಷ್ಟೇ ಮಾಡುತ್ತಿದ್ದಾರೆ. ಇದನ್ನು ಜಾವಡೇಕರ್‌ ಅತ್ಯಂತ ಜಾಣ್ಮೆಯಿಂದ ಕಾರ್ಯಗತಗೊಳಿಸಿದ್ದಾರೆ’ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಪಕ್ಷದ ವೇದಿಕೆಗಳಲ್ಲಿ ಕಾಣಿಸಿಕೊಳ್ಳುವ ಬದಲು ಹಿಂದೆ ನಿಂತು ಪಕ್ಷವನ್ನು ಅಧಿಕಾರಕ್ಕೆ ತರುವ ಜವಾಬ್ದಾರಿಯನ್ನು ಶೋಭಾಗೆ ನೀಡಲಾಗಿದೆ. ಇದೇ ಕಾರಣಕ್ಕಾಗಿ, ಸಂಸದ ಪಿ.ಸಿ. ಮೋಹನ್ ನೇತೃತ್ವದಲ್ಲಿ ರಚಿಸಿರುವ ಚುನಾವಣಾ ಉಸ್ತುವಾರಿ ಸಮಿತಿಯಲ್ಲಿ ಅವರಿಗೆ ಸಹ ಸಂಚಾಲಕಿ ಸ್ಥಾನ ನೀಡಲಾಗಿದೆ.

ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸದೇ ಇರುವವರನ್ನು ಮಾತ್ರ ಈ ಸಮಿತಿಗೆ ನೇಮಕ ಮಾಡಲಾಗಿದೆ. ಶೋಭಾ ಅವರನ್ನು ಈ ಸಮಿತಿಗೆ ನೇಮಕ ಮಾಡುವ ಮೂಲಕ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡುವುದಿಲ್ಲ ಎಂಬ ಸಂದೇಶವನ್ನೂ ಪಕ್ಷದ ವರಿಷ್ಠರು ರವಾನಿಸಿದ್ದಾರೆ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.