ಬೆಂಗಳೂರು (ಪಿಟಿಐ): ಸಚಿವ ಸೋಮಣ್ಣ ವಿರುದ್ಧದ ಭೂಹಗರಣ ಪ್ರಕರಣದಲ್ಲಿ ಪೊಲೀಸರು ಸಲ್ಲಿಸಿರುವ ಬಿ ರಿಪೋರ್ಟ್ ಕುರಿತಂತೆ ರವಿಕೃಷ್ಣಾರೆಡ್ಡಿ ಅವರು ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿದ ಲೋಕಾಯುಕ್ತ ನ್ಯಾಯಾಲಯ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಚಿವ ಸೋಮಣ್ಣ ವಿರುದ್ಧ ಶುಕ್ರವಾರ ಸಮನ್ಸ್ ಜಾರಿ ಮಾಡಿದೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವ ಸೋಮಣ್ಣ ಮತ್ತು ಅವರ ಪತ್ನಿ, ಹಾಗೂ ಲಿಂಗರಾಜು ಅವರಿಗೆ ಏಪ್ರಿಲ್ 30 ರಂದು ನ್ಯಾಯಾಲಯಕ್ಕೆ ತಪ್ಪದೇ ಹಾಜರಾಗಬೇಕೆಂದು ನ್ಯಾಯಾಧೀಶರಾದ ಎನ್.ಕೆ. ಸುಧೀಂದ್ರರಾವ್ ಅವರು ಸಮನ್ಸ್ ಜಾರಿಗೊಳಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಸತಿ ಸಚಿವ ವಿ.ಸೋಮಣ್ಣ, ಅವರ ಪತ್ನಿ ಶೈಲಜಾ ಮತ್ತು ಇತರರ ವಿರುದ್ಧ ಸಾಫ್ಟ್‌ವೇರ್ ಎಂಜಿನಿಯರ್ ರವಿಕೃಷ್ಣಾ ರೆಡ್ಡಿ ಸಲ್ಲಿಸಿರುವ ಖಾಸಗಿ ದೂರಿನಲ್ಲಿರುವ ಆರೋಪಗಳಲ್ಲಿ ಹುರುಳಿಲ್ಲ ಎಂದು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ (ಲೋಕಾಯುಕ್ತ) ವಿಶೇಷ ನ್ಯಾಯಾಲಯಕ್ಕೆ ಲೋಕಾಯುಕ್ತ ಪೊಲೀಸರು `ಬಿ` ವರದಿ ಸಲ್ಲಿಸಿದ್ದರು.
ರವಿಕೃಷ್ಣಾ ರೆಡ್ಡಿ ಅವರಿಗೆ ಸೋಮವಾರ ನೋಟಿಸ್ ನೀಡಿರುವ ಲೋಕಾಯುಕ್ತ ಪೊಲೀಸರು, `ನಾಗದೇವನಹಳ್ಳಿಯಲ್ಲಿನ 22 ಗುಂಟೆ ಭೂಮಿಯನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವಲ್ಲಿ ಅಕ್ರಮ ನಡೆದಿದೆ ಎಂಬುದಕ್ಕೆ ಸೂಕ್ತ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ ಎಂದೂ ಅವರು ತಿಳಿಸಿದ್ದರು.
ಆದರೆ ಈ ಬಿ ರಿಪೋರ್ಟ್ ನ್ನು ರವಿಕೃಷ್ಣಾರೆಡ್ಡಿ ಅವರು ನ್ಯಾಯಾಲಯದಲ್ಲಿ ಮಾರ್ಚಿ 29 ಪ್ರಶ್ನಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.