ADVERTISEMENT

ಸತ್ತು ಬದುಕಿದ ಯುವತಿ ಮತ್ತೆ ಆಸ್ಪತ್ರೆಗೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2013, 20:02 IST
Last Updated 21 ಜುಲೈ 2013, 20:02 IST
ಪ್ರತಿಭಟನಾನಿರತರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿದರು. ಚೇತನಾ (ಒಳಚಿತ್ರ)
ಪ್ರತಿಭಟನಾನಿರತರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿದರು. ಚೇತನಾ (ಒಳಚಿತ್ರ)   

ಚಿತ್ರದುರ್ಗ: ವೈದ್ಯರೊಬ್ಬರು ನೀಡಿದ `ತಪ್ಪು ಚಿಕಿತ್ಸೆ'ಯಿಂದಾಗಿ ಸಾವಿನ ಬಾಗಿಲು ತಟ್ಟ್ದ್ದಿದ ಯುವತಿಯನ್ನು ಶವಸಂಸ್ಕಾರಕ್ಕೆ ತೆಗೆದುಕೊಂಡು ಹೋಗುವಾಗ ಆಕಸ್ಮಿಕವಾಗಿ ಆಕೆ ಉಸಿರಾಡಿದ್ದನ್ನು ಗಮನಿಸಿ ಪುನಃ ಆಸ್ಪತ್ರೆಗೆ ದಾಖಲಿಸಿದ ಘಟನೆ ಭಾನುವಾರ ನಡೆದಿದೆ.

ಸಿರಿಗೆರೆ ಸಮೀಪದ ಹಿರೆಬೆನ್ನೂರಿನ ನಿವಾಸಿ ಚೇತನಾ (22) ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಯುವತಿ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್‌ಗೆ ದಾಖಲಿಸಲಾಗಿದೆ.

ಘಟನೆಯ ಹಿನ್ನೆಲೆ: ಓದುವ ತೀವ್ರ ಅಭ್ಯಾಸ ಇದ್ದ ಚೇತನಾಗೆ ನಿದ್ದೆ ಕೊರತೆಯಿಂದ ಕೆಲ ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿತ್ತು. ಆಕೆಯನ್ನು ಪೋಷಕರು ಚಿಕಿತ್ಸೆಗಾಗಿ ನಗರದ ಕೃಷ್ಣ ನರ್ಸಿಂಗ್ ಹೋಮ್‌ಗೆ ದಾಖಲಿಸಿದ್ದಾರೆ. ಈ ಸಂದರ್ಭದಲ್ಲಿ ವೈದ್ಯರು ಎರಡು ಇಂಜಕ್ಷನ್ ನೀಡಿದ್ದು, ಇದರಿಂದ ಎರಡು ಮೂರು ದಿನಗಳಾದರೂ ಆಕೆ ಎಚ್ಚರಗೊಂಡಿಲ್ಲ.

ಗಾಬರಿಗೊಂಡ ಪೋಷಕರು, ನಗರದ ಮತ್ತೊಂದು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿನ ವೈದ್ಯರು, ಪ್ರಕರಣ ಸೂಕ್ಷ್ಮವಾಗಿದೆ. ಬೇರೆ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸ್ದ್ದಿದಾರೆ. ನಂತರ ಪೋಷಕರು ಆಕೆಯನ್ನು ಉಡುಪಿಯ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಜುಲೈ 20ರ ರಾತ್ರಿವರೆಗೂ ಚಿಕಿತ್ಸೆ ನೀಡಿದ ಮಣಿಪಾಲ್ ಆಸ್ಪತ್ರೆ ವೈದ್ಯರು, ಚೇತನಾ ಬದುಕುಳಿಯುವ ಸಾಧ್ಯತೆ ಕಡಿಮೆ ಎಂದಿದ್ದಾರೆ. ನಂತರ ಆಂಬುಲೆನ್ಸ್‌ನಲ್ಲಿ ಚೇತನಾಳನ್ನು ವಾಪಸ್ ಊರಿಗೆ ಕರೆತಂದಿದ್ದಾರೆ. ಮಾರ್ಗ ಮಧ್ಯೆ ಆಕೆ ಸತ್ತು ಹೋಗಿದ್ದಾಳೆ ಎಂದು ಭಾವಿಸಿದ ಪೋಷಕರು ಊರಿನಲ್ಲಿ ಶವಸಂಸ್ಕಾರಕ್ಕೆ ತಯಾರಿ ನಡೆಸಲು  ಬಂಧುಗಳಿಗೆ ಸೂಚಿಸಿದಾರೆ. ಆದರೆ ನಂತರ ಆಂಬುಲೆನ್ಸ್‌ನಲ್ಲಿ ಚೇತನಾ ಉಸಿರಾಡುತ್ತಿರುವುದನ್ನು ಗಮನಿಸಿ ಕೂಡಲೇ ನಿಮ್ಹಾನ್ಸ್‌ಗೆ ಕರೆದುಕೊಂಡು ಹೋಗಲಾಗಿದೆ.

ಲಾಠಿ ಪ್ರಹಾರ: ಘಟನೆಗೆ ಕಾರಣರಾದ ವೈದ್ಯರ ವಿರುದ್ಧ ಭಾನುವಾರ ಚೇತನಾ ಸಂಬಂಧಿಕರು ಘೋಷಣೆಗಳನ್ನು ಕೂಗಿ ನರ್ಸಿಂಗ್ ಹೋಂ ಎದುರು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಆಸ್ಪತ್ರೆಗೆ ನುಗ್ಗಲು ಯತ್ನಿಸಿದ ಜನರ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದಾರೆ.

`ಚೇತನಾ ಈ ಸ್ಥಿತಿ ತಲುಪಲು ವೈದ್ಯ ದೀಪಕ್ ಅವರು ತಪ್ಪು ಚಿಕಿತ್ಸೆ ನೀಡಿದ್ದೇ ಕಾರಣ' ಎಂದು ಪೋಷಕರು ಆರೋಪಿಸಿದ್ದಾರೆ.
ಈ ಸಂಬಂಧ ವೈದ್ಯರ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.