ADVERTISEMENT

ಸತ್ಯ, ಅಹಿಂಸೆ ಪಾಲನೆಗೆ ಕರೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2011, 19:00 IST
Last Updated 17 ಏಪ್ರಿಲ್ 2011, 19:00 IST
ಸತ್ಯ, ಅಹಿಂಸೆ ಪಾಲನೆಗೆ ಕರೆ
ಸತ್ಯ, ಅಹಿಂಸೆ ಪಾಲನೆಗೆ ಕರೆ   

ಬೆಂಗಳೂರು: ‘ಶ್ರಾವಕರು ಸತ್ಯ, ಅಹಿಂಸೆ ಮತ್ತು ಧರ್ಮವನ್ನು ಜೀವನದಲ್ಲಿ ಕಟ್ಟುನಿಟ್ಟಾಗಿ ಆಳವಡಿಸಿಕೊಳ್ಳಬೇಕು. ಆ ಮೂಲಕ ಇತರರಿಗೆ ಮಾದರಿಯಾಗಬೇಕು’ ಎಂದು ಕರ್ನಾಟಕ ಲೋಕ ಸೇವಾ ಆಯೋಗದ ಸದಸ್ಯ ಎಚ್.ವಿ.ಪಾರ್ಶ್ವನಾಥ ಕರೆ ನೀಡಿದರು.

ಕರ್ನಾಟಕ ಜೈನ ಅಸೋಸಿಯೇಷನ್ ನಗರದಲ್ಲಿ ಶನಿವಾರ ಆಯೋಜಿಸಿದ್ದ ಮಹಾವೀರ ಜಯಂತಿ ಮತ್ತು ‘ಕರ್ನಾಟಕ ದಿಗಂಬರ ಜಿನ ಮಂದಿರಗಳು’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.‘ಮಹಾವೀರರು ಜೀವನದಲ್ಲಿ ಮೋಕ್ಷ ಸಾಧನೆಯ ಮಹತ್ವವನ್ನು ಹೆಚ್ಚು ಪರಿಣಾಮಕಾರಿಯಾಗಿ ಪ್ರಚಾರ ಪಡಿಸಿದ್ದರು. ಅವರ ತತ್ವ ಹಾಗೂ ಚಿಂತನೆಗಳಿಂದ ಜೈನ ಧರ್ಮವು ಹೆಚ್ಚು ಅರ್ಥಗರ್ಭಿತವಾಗಿದೆ’ ಎಂದು ತಿಳಿಸಿದರು.

ವಿದ್ವಾಂಸ ಪಾವಗಡ ಪ್ರಕಾಶ್‌ರಾವ್ ಮಾತನಾಡಿದರು. ಜೈನ ಸಂಸ್ಕೃತಿಯ ಉನ್ನತ ಅಧ್ಯಯನದಲ್ಲಿ ತೊಡಗಿರುವ ಜರ್ಮನ್ ಯುನಿಕ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ರಾಬರ್ಟ್ ಜೇಡನ್ ಘೋಷ್ ಮಹಾವೀರರ ತತ್ವಗಳ ಕುರಿತು ಅಚ್ಚ ಕನ್ನಡದಲ್ಲಿ ಮಾತನಾಡಿ ಗಮನ ಸೆಳೆದರು.

ಸಾಹಿತಿಗಳಾದ ಕೌಸಲ್ಯ ಧರಣೇಂದ್ರ, ಡಾ.ಎಸ್.ಪಿ.ಪದ್ಮ ಪ್ರಸಾದ್, ನಾಟಕಕಾರ ವಜ್ರಕುಮಾರ ಕಿವಡೆ ಅವರಿಗೆ ಸನ್ಮಾನಿಸಲಾಯಿತು. ಕಾರ್ಕಳ ದಾನಶಾಲಾ ಮಠದ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ, ಅನಿತಾ ಸುರೇಂದ್ರಕುಮಾರ್, ಅಸೋಸಿಯೇಷನ್ ಅಧ್ಯಕ್ಷ ಎಸ್.ಜಿತೇಂದ್ರ ಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.