ADVERTISEMENT

ಸನ್ನಡತೆ: 287 ಕೈದಿಗಳಿಗೆ ಬಿಡುಗಡೆ ಭಾಗ್ಯ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2016, 19:30 IST
Last Updated 13 ಆಗಸ್ಟ್ 2016, 19:30 IST
ಸನ್ನಡತೆ: 287 ಕೈದಿಗಳಿಗೆ ಬಿಡುಗಡೆ ಭಾಗ್ಯ
ಸನ್ನಡತೆ: 287 ಕೈದಿಗಳಿಗೆ ಬಿಡುಗಡೆ ಭಾಗ್ಯ   

ಬೆಂಗಳೂರು: ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಒಟ್ಟು 287 ಕೈದಿಗಳನ್ನು ಸನ್ನಡತೆ ಆಧಾರದಲ್ಲಿ ಇದೇ 15ರಂದು (ಸ್ವಾತಂತ್ರ್ಯೋತ್ಸವ ದಿನ) ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದೆ.

ಸನ್ನಡತೆಯ ಕೈದಿಗಳ ಬಿಡುಗಡೆಗೆ ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆ ಸಮ್ಮತಿ ನೀಡಿದೆ.  ರಾಜ್ಯ ಸರ್ಕಾರ ರೂಪಿಸಿದ ಪರಿಷ್ಕೃತ ಮಾರ್ಗಸೂಚಿ ಅನ್ವಯ ಕೈದಿಗಳು ಬಿಡುಗಡೆ ಆಗಲಿದ್ದಾರೆ.

ಸಿಬಿಐ, ಎನ್‌ಐಎ ತನಿಖೆಯಲ್ಲಿ ಶಿಕ್ಷೆಗೊಳಗಾದ ಕೈದಿಗಳು, ಭಯೋತ್ಪಾದನೆ, ರಾಜದ್ರೋಹ, ಎರಡಕ್ಕಿಂತ ಹೆಚ್ಚು ಕೊಲೆ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದವರು, ಶಸ್ತ್ರಸಜ್ಜಿತ ದರೋಡೆಕೋರರು, ಸುಪಾರಿ ಕೊಲೆಗಾರರು, ಮಾದಕ ದ್ರವ್ಯ ಸಾಗಣೆದಾರರು , ಅತ್ಯಾಚಾರ, ದರೋಡೆ, ಕೊಲೆ ಮಾಡಿದವರನ್ನು ಬಿಡುಗಡೆ ವ್ಯಾಪ್ತಿಯಿಂದ ಹೊರಗೆ ಇಡಲಾಗಿದೆ. ಸಿಆರ್‌ಪಿಸಿ (ದಂಡ ಪ್ರಕ್ರಿಯಾ ಸಂಹಿತೆ) ಕಲಂ 433 (ಎ) ಅನುಸಾರ ಶಿಕ್ಷೆ ಒಳಗಾದ ಕೈದಿಗಳು 14 ವರ್ಷ ಸೆರೆವಾಸ ಅನುಭವಿಸಿದ್ದರೆ ಮಾತ್ರ ಅವರಿಗೆ ಪರಿಷ್ಕೃತ ಮಾರ್ಗಸೂಚಿ ಅನ್ವಯವಾಗುತ್ತದೆ.

ಜೀವಾವಾಧಿ ಶಿಕ್ಷೆಗೆ ಒಳಗಾಗಿರುವ 65 ವರ್ಷ ದಾಟಿದ ಪುರುಷ ಕೈದಿಗಳು ಯಾವುದೇ ಕಡಿತ ಇಲ್ಲದೆ 10 ವರ್ಷ ಜೈಲು ಅವಧಿ ಪೂರೈಸಿದ್ದರೆ ಮತ್ತು ಏಳು ವರ್ಷ ಕಾರಾಗೃಹದಲ್ಲಿರುವ 60 ವರ್ಷ ದಾಟಿದ ಮಹಿಳಾ ಕೈದಿಗಳು ಬಿಡುಗಡೆಗೆ ಅರ್ಹರಾಗಿದ್ದಾರೆ.

433ಎ ಏನು ಹೇಳುತ್ತದೆ?
ಸಿಆರ್‌ಪಿಸಿ 433 (ಎ) ಅನುಸಾರ ಮರಣದಂಡನೆಗೆ ಒಳಗಾದವರು ರಾಷ್ಟ್ರಪತಿಗಳಿಂದ ಕ್ಷಮಾದಾನ ಪಡೆದಿದ್ದರೆ ಅಥವಾ ಉಚ್ಚ ನ್ಯಾಯಾಲಯಗಳ ತೀರ್ಪಿನ ಅನುಸಾರ ಮರಣ ದಂಡನೆಯಿಂದ ಜೀವಾವಧಿ ಶಿಕ್ಷೆಗೆ ಪರಿವರ್ತನೆ ಹೊಂದಿದ್ದರೆ ಅಂಥವರು 14 ವರ್ಷ ಶಿಕ್ಷೆ ಅನುಭವಿಸಲೇಬೇಕು.

ಯಾವುದೇ ವಿನಾಯ್ತಿ ಅನುಸಾರ ಅವರನ್ನು 14 ವರ್ಷಕ್ಕೂ ಮುನ್ನ ಬಿಡುಗಡೆಗೆ ಪರಿಗಣಿಸುವಂತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.