ADVERTISEMENT

ಸಪ್ತರಾತ್ರೋತ್ಸವಕ್ಕೆ ಚಾಲನೆ

ಮಂತ್ರಾಲಯ: ರಾಯರ ಆರಾಧನೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2016, 19:30 IST
Last Updated 17 ಆಗಸ್ಟ್ 2016, 19:30 IST
ಮಂತ್ರಾಲಯದಲ್ಲಿ ಶ್ರೀಗುರುರಾಯರ 345ನೇ ಆರಾಧನೆ ಅಂಗವಾಗಿ ನಡೆಯುತ್ತಿರುವ ಸಪ್ತರಾತ್ರೋತ್ಸವ ಕಾರ್ಯಕ್ರಮದಲ್ಲಿ ಶ್ರೀಸುಬುಧೇಂದ್ರ ತೀರ್ಥರು ಗೋಪೂಜೆ ಮಾಡಿದರು
ಮಂತ್ರಾಲಯದಲ್ಲಿ ಶ್ರೀಗುರುರಾಯರ 345ನೇ ಆರಾಧನೆ ಅಂಗವಾಗಿ ನಡೆಯುತ್ತಿರುವ ಸಪ್ತರಾತ್ರೋತ್ಸವ ಕಾರ್ಯಕ್ರಮದಲ್ಲಿ ಶ್ರೀಸುಬುಧೇಂದ್ರ ತೀರ್ಥರು ಗೋಪೂಜೆ ಮಾಡಿದರು   

ರಾಯಚೂರು: ಮಂತ್ರಾಲಯದಲ್ಲಿ ಶ್ರೀರಾಘವೇಂದ್ರಸ್ವಾಮಿ ಅವರ 345ನೇ ಆರಾಧನೆ ಅಂಗವಾಗಿ ಸಪ್ತರಾತ್ರೋತ್ಸವ ಕಾರ್ಯಕ್ರಮಕ್ಕೆ ಬುಧವಾರ ಸಂಜೆ ಧ್ವಜಾರೋಹಣ ನೆರವೇರಿಸುವ ಮೂಲಕ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಚಾಲನೆ ನೀಡಿದರು.

ಗೋಪೂಜೆ, ಗಜಾಶ್ವ ಪೂಜೆ, ಲಕ್ಷ್ಮಿ ಪೂಜೆ ಹಾಗೂ ಧಾನ್ಯ ಪೂಜೆ ಮಾಡಿದ ನಂತರ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸ್ವಾಮೀಜಿ,  ‘ಶ್ರೀಗುರುರಾಯರು ದೇಶ, ಭಾಷೆ, ಪಂಥ, ಜಾತಿ, ಧರ್ಮವನ್ನು ಮೀರಿದವರು. ಅವರ ಆರಾಧನೆಯನ್ನು ಸರ್ವಜನಾಂಗದವರು ಆಚರಿಸುತ್ತಾರೆ. ಶರಣುಬಂದವರ ಕಷ್ಟ– ಕಾರ್ಪಣ್ಯಗಳನ್ನು ಪರಿಹರಿಸುವ ಗುರುರಾಯರು, ಜನಸಾಮಾನ್ಯರ ಆರಾಧ್ಯ ದೈವ’ ಎಂದರು.

ಬೆಳಿಗ್ಗೆ ಪ್ರಭಾತೋತ್ಸವ, ಋಗ್ವೇದ ಉಪಾಕರ್ಮ ನಡೆಯಿತು. ಜ್ಞಾನ ಯಜ್ಞ ಕಾರ್ಯಕ್ರಮದಲ್ಲಿ ಕೌತಾಲಂ ಕೆ.ಅಪ್ಪಣ್ಣಾಚಾರ್ಯ ಮತ್ತು ರಾಯಚೂರಿನ ಡಾ.ಅಕ್ಕಿ ರಾಘವೇಂದ್ರಾಚಾರ್‌ ಉಪನ್ಯಾಸ ನೀಡಿದರು.
ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಂಗಳೂರಿನ ಜಿ.ಎಸ್‌.ವೈಷ್ಣವಿ ಅವರಿಂದ ದಾಸವಾಣಿ ಮತ್ತು ವಾಂಗ್ಮಯಿ ಪ್ರಸಾದ್‌ ಅವರಿಂದ ಭರತ ನಾಟ್ಯ ಪ್ರದರ್ಶನ ನಡೆಯಿತು.

ಸಪ್ತರಾತ್ರೋತ್ಸವದಲ್ಲಿ ನಿತ್ಯ ಬೆಳಿಗ್ಗೆ 4ರಿಂದ 8-30ರವರೆಗೆ ನಿರ್ಮಾಲ್ಯ ವಿಸರ್ಜನೆ, ರಾಯರ ಪಾದುಕಾ ಪೂಜೆ, ಪಂಚಾಮೃತ ಅಭಿಷೇಕ,  ಶ್ರೀಗಳಿಂದ ಶ್ರೀ ಮೂಲರಾಮದೇವರ ಪೂಜೆ, ಬೆಳಿಗ್ಗೆ 9ರಿಂದ 11ರ ವರೆಗೆ ವಿದ್ವಾಂಸರಿಂದ ಪ್ರವಚನ, ಹಗಲು ದೀವಟಿಗೆ, ಸಂಜೆ ಪ್ರಾಕಾರ ಉತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.