ADVERTISEMENT

ಸಬ್ಸಿಡಿ ಕೊಟ್ಟು ಉತ್ತಮ ಪುಸ್ತಕ ಬರೆಸಿ: ವಸಂತ ಕುಷ್ಟಗಿ

‘ಪುಸ್ತಕ ಸಂಸ್ಕೃತಿ ಮತ್ತು ಸವಾಲುಗಳು’

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2016, 19:30 IST
Last Updated 3 ಡಿಸೆಂಬರ್ 2016, 19:30 IST
ಸಮಾನಾಂತರ ವೇದಿಕೆಯಲ್ಲಿ ನಡೆದ ಗೋಷ್ಠಿಯಲ್ಲಿ ವೆಂಕಟೇಶ ಮಾಚಕನೂರ, ವಸಂತ ಕುಷ್ಟಗಿ, ಸತೀಶಕುಮಾರ್ ಹೊಸಮನಿ ಮತ್ತು  ಬೈರಮಂಗಲ ರಾಮೇಗೌಡ ಇದ್ದಾರೆ.
ಸಮಾನಾಂತರ ವೇದಿಕೆಯಲ್ಲಿ ನಡೆದ ಗೋಷ್ಠಿಯಲ್ಲಿ ವೆಂಕಟೇಶ ಮಾಚಕನೂರ, ವಸಂತ ಕುಷ್ಟಗಿ, ಸತೀಶಕುಮಾರ್ ಹೊಸಮನಿ ಮತ್ತು ಬೈರಮಂಗಲ ರಾಮೇಗೌಡ ಇದ್ದಾರೆ.   

ಸಮಾನಾಂತರ ವೇದಿಕೆ (ರಾಯಚೂರು): ‘ಉತ್ತಮ ಲೇಖಕರಿಗೆ ಸಬ್ಸಿಡಿ ಕೊಟ್ಟು ಪುಸ್ತಕ ಬರೆಸುವ ಮತ್ತು ಪ್ರಕಟಿಸುವ ಕಾರ್ಯ ಸರ್ಕಾರದಿಂದ ಆಗಬೇಕು’ ಎಂದು ವಿಶ್ರಾಂತ ಪ್ರಾಧ್ಯಾಪಕ ವಸಂತ ಕುಷ್ಟಗಿ ಒತ್ತಾಯಿಸಿದರು.

82 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೆ ದಿನವಾದ ಶನಿವಾರ ಘನಮಠ ಶಿವಯೋಗಿ ವೇದಿಕೆಯಲ್ಲಿ ನಡೆದ ‘ಪುಸ್ತಕ ಸಂಸ್ಕೃತಿ ಮತ್ತು ಸವಾಲುಗಳು’ ವಿಚಾರಗೋಷ್ಠಿ ಅಧ್ಯಕ್ಷತೆವಹಿಸಿ ಮಾತನಾಡಿದರು.

‘ಉತ್ತಮ ಲೇಖಕರಿಂದ ವಿವಿಧ ವಿಷಯಗಳ ಕುರಿತು ಪುಸ್ತಕಗಳ ಪ್ರಕಟಣೆಗೆ ಹಸ್ತಪ್ರತಿಗಳನ್ನು ತರಿಸಿಕೊಳ್ಳಬೇಕು. ತರಿಸಿಕೊಂಡ ಹಸ್ತಪ್ರತಿಗಳನ್ನು ಸಮಗ್ರ ಪರಿಶೀಲನೆಗೆ ಒಳಪಡಿಸಿ, ಆಯ್ಕೆ ಮಾಡಬೇಕು. ಒಳ್ಳೆಯ ಪುಸ್ತಕಗಳನ್ನು ಪ್ರಕಟಿಸುವವರಿಗೆ ಮಾತ್ರ ಸಬ್ಸಿಡಿ ನೀಡಿ’ ಎಂದು ಆಗ್ರಹಿಸಿದರು.

ADVERTISEMENT

‘ಬರಹಗಾರರನ್ನು ಪೋಷಿಸುವ ಜವಾಬ್ದಾರಿ ಸರ್ಕಾರದ್ದು. ಬರಹಗಾರರು, ವಿತರಕರು ಮತ್ತು ಮುದ್ರಕರ ನಡುವೆ ಸಮನ್ವಯ ಸಾಧಿಸುವುದರ ಜೊತೆಗೆ ಪೋಷಣೆಯನ್ನೂ ಮಾಡಬೇಕು. ಹೈದ್ರಾಬಾದ್‌ ಕರ್ನಾಟಕಕ್ಕೆ 371 ಜೆ ಸ್ಥಾನಮಾನ ಸಿಕ್ಕ ಮೇಲೆ ಪುಸ್ತಕ ಖರೀದಿ ಉತ್ತಮಗೊಂಡಿದೆ. ಹಿಂದೆ ಲೇಖಕರಿಂದ ವರ್ಷಕ್ಕೆ 300 ಪುಸ್ತಕಗಳನ್ನು ಖರೀದಿಸಲಾಗುತ್ತಿತ್ತು. ಈಗ 1300 ಕ್ಕೆ ಏರಿಕೆ ಆಗಿದೆ’ ಎಂದು  ಹೇಳಿದರು.

‘ಪ್ರತಿಯೊಂದು ಮನೆಯಲ್ಲೂ ಪುಟ್ಟ ಗ್ರಂಥಾಲಯ ಇರಬೇಕು. ದಾನ ಚಿಂತಾಮಣಿ ಅತ್ತಿಮಬ್ಬೆ ರನ್ನನ ಕೃತಿಯನ್ನು ಸಾವಿರಾರು ಪ್ರತಿ ಮಾಡಿಸಿ ಅವುಗಳನ್ನು ಉಚಿತವಾಗಿ ಹಂಚುವ ಕೆಲಸ ಮಾಡಿದ್ದಳು. ಹಾಗೆಯೇ ಫ.ಗು.ಹಳಕಟ್ಟಿ ಅವರು ವಚನಗಳು, ಹನುಮಂತರಾಯರು ದಾಸ ಸಾಹಿತ್ಯ, ಗಳಗನಾಥರು ದೇಶಭಕ್ತಿ ಕುರಿತು ಪುಸ್ತಕಗಳನ್ನು ಪ್ರಕಟಿಸಿ ಬೆಳಕಿಗೆ ತರುವ ಕೆಲಸ ಮಾಡದೇ ಇದ್ದರೆ ಅವು ಪ್ರಚಲಿತಕ್ಕೆ ಬರಲು ಸಾಧ್ಯವೇ ಇರುತ್ತಿರಲಿಲ್ಲ. ಬಿಂದು ಮಾಧವರಾಯರು ಬರಿ ಮೈಯಲ್ಲಿ  ಪುಸ್ತಕಗಳನ್ನು ಹೊತ್ತು  ಊರಿಂದೂರಿಗೆ ಹೋಗಿ ಮಾರುತ್ತಿದ್ದರು. ಸಿಂಪಿ ಲಿಂಗಣ್ಣ, ಜಿ.ಪಿ.ರಾಜರತ್ನಂ ಅವರು ಪುಸ್ತಕ ಸಂಸ್ಕೃತಿ ಬೆಳೆಸಲು ನೀಡಿದ ಕೊಡುಗೆ ಮರೆಯಲು ಸಾಧ್ಯವಿಲ್ಲ’ ಎಂದರು.

ಲೇಖಕ ವೆಂಕಟೇಶ ಮಾಚಕನೂರ ಮಾತನಾಡಿ,ಟಿ.ವಿ ಮಾಧ್ಯಮ ಕಾಲಿಟ್ಟ ಬಳಿಕ  ಗೃಹಿಣಿಯರಲ್ಲಿ ಓದುವ ಸಂಸ್ಕೃತಿಯೇ ಮರೆಯಾಗಿ ಹೋಗಿದೆ. ಕಾದಂಬರಿಯನ್ನು ಓದುವ ಮೂಲಕ ಗೃಹಿಣಿಯರು ಸಾಹಿತ್ಯದ ಗಂಧವನ್ನು ಪಡೆಯುತ್ತಿದ್ದರು. ಈಗ ಓದಿನಿಂದ ವಿಮುಖರಾಗಿದ್ದಾರೆ’ ಎಂದರು.

ಹೆಂಡದಿಂದ ಬಂದ ಆದಾಯ ಹೆಚ್ಚಾಗಿತ್ತು
‘ಹಿಂದೊಮ್ಮೆ  ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಪುಸ್ತಕ ಮಾರಾಟದಿಂದ ₹ ಒಂದು ಕೋಟಿ ಆದಾಯ ಬಂದಿತ್ತು. ಅದೇ ಸಂದರ್ಭದಲ್ಲಿ ಆ ಊರಿನಲ್ಲಿ ಮದ್ಯ ಮಾರಾಟದಿಂದ ಆ ಮೂರು ದಿನಗಳಲ್ಲಿ ಸಂಗ್ರಹವಾದ ಆದಾಯ ₹ 3 ಕೋಟಿ ಆಗಿತ್ತು. ಸದ್ಯಕ್ಕೆ ಈ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮದ್ಯ ಮಾರಾಟ ನಿಷೇಧಿಸಿರುವುದು ಸಮಾಧಾನದ ಸಂಗತಿ’ ಎಂದು ಲೇಖಕ  ವೆಂಕಟೇಶ ಮಾಚಕನೂರ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.