ADVERTISEMENT

ಸಮವಸ್ತ್ರದ ಅನುದಾನ ವಾಪಸ್- ಸಚಿವರ ಬೇಜವಾಬ್ದಾರಿ ಕಾರಣ: ಆರೋಪ

​ಪ್ರಜಾವಾಣಿ ವಾರ್ತೆ
Published 27 ಜನವರಿ 2012, 19:30 IST
Last Updated 27 ಜನವರಿ 2012, 19:30 IST

ಬೆಂಗಳೂರು: ಶಾಲಾ ಮಕ್ಕಳಿಗೆ ಸಮವಸ್ತ್ರ ಪೂರೈಸಲು ಕೇಂದ್ರ ಸರ್ಕಾರ ನೀಡಿದ್ದ 88 ಕೋಟಿ ರೂಪಾಯಿ ಅನುದಾನ ವಾಪಸ್ ಹೋಗಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಜವಳಿ ಸಚಿವ ವರ್ತೂರು ಪ್ರಕಾಶ್ ಅವರ ಬೇಜವಾಬ್ದಾರಿಯುತ ವರ್ತನೆಯೇ ಕಾರಣ ಎಂದು ಅಖಿಲ ಕರ್ನಾಟಕ ನೇಕಾರರ ವೇದಿಕೆ ಆರೋಪಿಸಿದೆ.

ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಬಾಲಕಿಯರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮಕ್ಕಳು, ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಮಕ್ಕಳಿಗೆ ಕೇಂದ್ರ ಸರ್ಕಾರದ ವತಿಯಿಂದ ಒಂದು ಜೊತೆ ಸಮವಸ್ತ್ರ ಒದಗಿಸಲು ರೂ 88 ಕೋಟಿ ಅನುದಾನ ನೀಡಲಾಗಿತ್ತು.

 ಆದರೆ, ರಾಜ್ಯ ಸರ್ಕಾರ ತನ್ನ ಪಾಲಿನ ಹೊಂದಾಣಿಕೆ ಅನುದಾನವನ್ನು ಬಿಡುಗಡೆ ಮಾಡದೇ ಲೋಪ ಎಸಗಿರುವುದರಿಂದ ಕೇಂದ್ರದ ಹಣ ಬಳಕೆಯಾಗಿಲ್ಲ ಎಂದು ವೇದಿಕೆಯ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಗಂಜಿ ಪತ್ರಿಕಾ ಹೇಳಿಕೆಯಲ್ಲಿ ದೂರಿದ್ದಾರೆ. ಕೇಂದ್ರದ ಅನುದಾನವನ್ನು ರಾಜ್ಯ ಸರ್ಕಾರ ಸಮರ್ಪಕವಾಗಿ ಬಳಸಿಕೊಂಡಿದ್ದರೆ ಲಕ್ಷಾಂತರ ಮಕ್ಕಳಿಗೆ ಉಚಿತ ಸಮವಸ್ತ್ರ ದೊರೆಯುತ್ತಿತ್ತು. ಸಮವಸ್ತ್ರದ ಬಟ್ಟೆಯನ್ನು ನೇಕಾರರಿಂದ ಖರೀದಿಸುತ್ತಿದ್ದರಿಂದ ಅವರಿಗೂ ಅನುಕೂಲವಾಗುತ್ತಿತ್ತು.

ಆದರೆ, ಶಿಕ್ಷಣ ಮತ್ತು ಜವಳಿ ಸಚಿವರು ಸಕಾಲಕ್ಕೆ ಕ್ರಮ ಕೈಗೊಳ್ಳದೇ ಇದ್ದುದರಿಂದ ವಿದ್ಯಾರ್ಥಿಗಳು ಮತ್ತು ನೇಕಾರರಿಗೆ ಅನ್ಯಾಯವಾಗಿದೆ. ಇದಕ್ಕೆ ಸಚಿವರೇ ಹೊಣೆ ಎಂದು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.