ADVERTISEMENT

ಸಮಾಜ ಧರ್ಮ ನೆನಪಿಸುವ ತರಳಬಾಳು ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2011, 5:50 IST
Last Updated 15 ಫೆಬ್ರುವರಿ 2011, 5:50 IST

ಬೆಂಗಳೂರು: ವ್ಯಕ್ತಿ ಧರ್ಮ, ಕುಟುಂಬ ಧರ್ಮ, ಸಮಾಜ ಧರ್ಮವನ್ನು ಈ ಮಹೋತ್ಸವ ನೆನಪಿಸುತ್ತದೆ.  ನಮ್ಮ ಮೂಲ ಧರ್ಮವೇನೆಂಬುದನ್ನು ನಮಗೆ ಅರಿವು ಮಾಡಿಕೊಡುವ ಈ ವೇದಿಕೆ ಸ್ಫೂರ್ತಿದಾಯಕವಾದುದು ಎಂದು ಸಚಿವ ಸುರೇಶ್ ಕುಮಾರ್ ಬಣ್ಣಿಸಿದರು.ಸೋಮವಾರ ಇಲ್ಲಿ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವದ ಐದನೇ ದಿನದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಈ ಮಹೋತ್ಸವ ನಂದನವನದ ಅನುಭವ ತರುತ್ತಿದ್ದು, ಇಂತಹ ಕಾರ್ಯಕ್ರಮ ಏರ್ಪಡಿಸಿದ ತರಳಬಾಳು ಶ್ರೀಗಳಿಗೆ ಬೆಂಗಳೂರು ನಾಗರಿಕರ ಪರವಾಗಿ ವಂದನೆ ಸಲ್ಲಿಸಿದರು.  ಧರ್ಮ ಮಾನವನನ್ನು ಸೃಷ್ಟಿಸಿರಲಿಲ್ಲ, ಮಾನವ ಧರ್ಮವನ್ನು ಸೃಷ್ಟಿಸಿದ್ದಾನೆ.  ಜಾತಿ, ವರ್ಣ, ಲಿಂಗಭೇದವನ್ನು ವಿರೋಧಿಸಲು ಹುಟ್ಟಿದ್ದು ಬಸವ ಧರ್ಮ  ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ನಾಗಮೋಹನ್ ತಿಳಿಸಿದರು.

ಧರ್ಮಗಳು ಬೆಳೆದಂತೆ ಧರ್ಮದ ಮೇಲೆ ಹಿಡಿತ ಹೊಂದಿರುವವರು ಕಟ್ಟುಪಾಡುಗಳನ್ನು ಹೇರುತ್ತಾರೆ, ಇದೇ ಪ್ರಜಾಪ್ರಭುತ್ವ ವಿರೋಧಿ ಕಾರ್ಯ. ಧರ್ಮ ರಾಜಕಾರಣದ ಜತೆ ಬೆರೆತಾಗ ಕೋಮುವಾದವಾಗುತ್ತದೆ. ಈ ಪ್ರಕ್ರಿಯೆಯನ್ನು ನಾವು ವಿರೋಧಿಸಬೇಕಾಗುತ್ತದೆ ಎಂದರು.ಸ್ವಾತಂತ್ರ್ಯಾನಂತರ ನಾವು ಯಾವುದೇ ಒಂದು ನಿರ್ದಿಷ್ಟ ಧರ್ಮದ ರಾಷ್ಟ್ರದ ಬದಲು ಜಾತ್ಯತೀತ ರಾಷ್ಟ್ರವನ್ನು ನಿರ್ಮಿಸಿಕೊಂಡು ನಮ್ಮ ಸಂವಿಧಾನದಲ್ಲಿ ಈ ಮೂಲ ತತ್ವವನ್ನು ಅಳವಡಿಸಿಕೊಂಡಿದ್ದೇವೆ ಎಂದು ಅವರು ಹೇಳಿದರು. 

ಆಶೀರ್ವಚನ ನೀಡಿದ ಬೆಂಗಳೂರಿನ ಕೈಲಾಸ ಆಶ್ರಮದ ಜಯೇಂದ್ರಪುರಿ ಸ್ವಾಮೀಜಿ, ನಿರಂತರವಾಗಿ ಬೆಳಕಿನಲ್ಲಿ ನಿಷ್ಠೆ ಉಳ್ಳವರು ಭಾರತೀಯರು ಎಂಬ ಪ್ರತೀತಿ ಇದೆ.  ಭೇದವನ್ನು ನೋಡದ ಕಣ್ಣುಗಳಲ್ಲಿ ಜ್ಞಾನವಿದೆ, ಭೇದ ನೋಡುವ ಕಣ್ಣುಗಳಲ್ಲಿ ಅಜ್ಞಾನ ತುಂಬಿರುತ್ತದೆ, ಭೇದದ ಮೂಲ ಕಂಡುಕೊಳ್ಳಬೇಕಿದೆ ನಾನು, ನನ್ನದೆಂಬ ಭಾವ ಮೂಡಿದರೆ ಕುಟುಂಬದಿಂದ ಮೊದಲ್ಗೊಂಡು ಒಡಕು ಮೂಡುತ್ತದೆ. ಭೇದಜ್ಞಾನ ಎಲ್ಲರನ್ನೂ ತುಂಡು ಮಾಡುತ್ತಿದೆ, ಸಮಾಜವನ್ನು ಒಡೆಯುತ್ತದೆ. ಶುದ್ಧತೆಯನ್ನು ಅಳವಡಿಸಿಕೊಂಡಾಗ ಅಜ್ಞಾನದಿಂದ ಹೊರಬರಲು ಸಾಧ್ಯ ಎಂದು ಕರೆ ನೀಡಿದರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ತರಳಬಾಳು ಹುಣ್ಣಿಮೆ ಸಮಾಜದಲ್ಲಿ ಸಂಕಷ್ಟ, ನೋವು ಎದುರಾದಾಗ ಸ್ಪಂದಿಸಿ, ಪರಿಹಾರ ಹುಡುಕುವ ಪ್ರಯತ್ನ ಮಾಡುತ್ತಿದೆ. ಸಮಾಜದ ಮುಂದಿನ ಪೀಳಿಗೆಯ ವಾರಸುದಾರರಾಗಿ ನಾವೇನು ಕೊಡುಗೆ ನೀಡುತ್ತಿದ್ದೇವೆ ಎಂಬುದನ್ನು ಮನಗಾಣಬೇಕು ಎಂದು ಸಲಹೆ ನೀಡಿದರು.ಸಿರಿಗೆರೆ ತರಳಬಾಳು ಪೀಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಜಾತಿ ಎಂಬ ಶಬ್ದಕ್ಕೆ ತರ್ಕ ಶಾಸ್ತ್ರದ ಅರ್ಥವೇ ಬೇರೆ, ಜನರ ಹಾಸುಹೊಕ್ಕಿನ ಭಾಷೆ ಅರ್ಥವೇ ಬೇರೆಯಾಗಿದೆ ಎಂದು ಅರ್ಥೈಸಿದರು.

ಹಾಸ್ಯಸಂಜೆ ಕಾರ್ಯಕ್ರಮದಲ್ಲಿ ಅಸಾದುಲ್ಲಾ ಬೇಗ್, ಪ್ರೊ.ಎಂ. ಕೃಷ್ಣೇಗೌಡ, ಗಂಗಾವತಿ ಪ್ರಾಣೇಶ್ ತಮ್ಮ ಹಾಸ್ಯದ ಮಾತುಗಳಿಂದ  ಸಭಿಕರನ್ನು ರಂಜಿಸಿದರು.ತರಳಬಾಳು ಸಾಣೇಹಳ್ಳಿ ಶಾಖಾಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ತೋಟಗಾರಿಕಾ ಸಚಿವ ಎಸ್.ಎ. ರವೀಂದ್ರನಾಥ್, ಹರಿಹರ ಶಾಸಕ ಹರೀಶ್, ತರೀಕೆರೆ ಶಾಸಕ ಸುರೇಶ್ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.