
ಮೈಸೂರು: ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲಾ ಹಂತದಲ್ಲಿ ದೇಸಿ ಭಾಷೆಯಲ್ಲಿ ಶಿಕ್ಷಣ ಮಾಧ್ಯಮ ಅಳವಡಿಕೆ ಕುರಿತ ವ್ಯಾಜ್ಯದಲ್ಲಿ ಸೋಲಾದರೆ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಸಂಘಟನೆಗಳು ‘ಸೋತ ದಿನ’ ಆಚರಿಸುವ ನಿರ್ಧಾರ ಕೈಗೊಳ್ಳಬೇಕು ಎಂದು ಸಾಹಿತಿ ದೇವನೂರ ಮಹಾದೇವ ಅಭಿಪ್ರಾಯಪಟ್ಟರು.
ಲೋಹಿಯಾ ಪ್ರಕಾಶನದ ವತಿಯಿಂದ ನಗರದ ರಂಗಾಯಣದ ಶ್ರೀರಂಗ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ರಂಗನಾಥ ಕಂಟನಕುಂಟೆ ಅವರ ‘ಸೇನೆಯಿಲ್ಲದ ಕದನ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಈ ಸಲಹೆ ಮಾಡಿದರು.
‘ನಮ್ಮ ತಾಯಿ ಯಾರು ಎಂದು ನಿರ್ಧರಿಸುವುದಕ್ಕೆ ಸುಪ್ರೀಂಕೋರ್ಟ್ ಮೇಟಿಲು ಏರಿದ್ದೇವೆ. ಈ ಸಂಬಂಧಿತ ಅರ್ಜಿಯನ್ನು ಐವರು ನ್ಯಾಯಮೂರ್ತಿಗಳ ವಿಭಾಗೀಯ ಪೀಠ ಮಂಗಳವಾರ ವಿಚಾರಣೆಗೆತ್ತಿಕೊಂಡಿದೆ. ಈ ಕೇಸನ್ನು ಸೋತರೆ ಕಸಾಪ ಮತ್ತು ಕನ್ನಡ ಸಂಘಟನೆಗಳು ಸಾಹಿತ್ಯ ಸಮ್ಮೇಳನ ಆಯೋಜಿಸುವುದಿಲ್ಲ, ಕನ್ನಡ ಸಂಭ್ರಮಗಳನ್ನು ಆಚರಿಸುವುದಿಲ್ಲ, ಸನ್ಮಾನ ಕಾರ್ಯಕ್ರಮಗಳನ್ನು ಏರ್ಪಡಿಸುವುದಿಲ್ಲ ಎಂದು ತೀರ್ಮಾನಿಸಿ ಕೈಗೆ ಕಪ್ಪುಪಟ್ಟಿ ಕಟ್ಟಿಕೊಂಡು ವಿರೋಧ ವ್ಯಕ್ತಪಡಿಸಬೇಕು ಎಂದರು.
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕಿದಾಗ ಕನ್ನಡದ ಜುಟ್ಟಿಗೆ ಮಲ್ಲಿಗೆ ಹೂವು ಬಂತು. ಆದರೆ, ಕನ್ನಡ ಹೊಟ್ಟೆಗೆ ಹಿಟ್ಟು ಇಲ್ಲವಾಗಿದೆ. ಮಾತೃಭಾಷೆಯಲ್ಲಿ ಶಿಕ್ಷಣ ನೀಡುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ದಿಟ್ಟತನ ಪ್ರದರ್ಶಿಸಬೇಕಿದೆ. ಇಂಥದ್ದು ಮಾಡಬೇಕು ಎಂದು ತೀರ್ಮಾನಿಸುವುದು ಸರ್ಕಾರ. ಈ ವಿಷಯದಲ್ಲಿ ಸರ್ಕಾರಕ್ಕೆ ಜಬರ್ದಸ್ತ್ ಮಾಡುವ ತಾಕತ್ತು ಇಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಕನ್ನಡಿಗರಲ್ಲಿ ಕನ್ನಡಾಭಿಮಾನ ಮೂಡಿಸಬೇಕು. ಕನ್ನಡಿಗರ ಆಂತರ್ಯದಲ್ಲಿ ಕನ್ನಡದ ಬಗ್ಗೆ ನಿಜ ಪ್ರೀತಿ ಇಲ್ಲ ಎನಿಸುತ್ತಿದೆ ಎಂದೂ ದೇವನೂರ ಬೇಸರ ವ್ಯಕ್ತಪಡಿಸಿದರು.
ಹಿಂದೆ ಪಟೇಲರು, ಶಾನುಭೋಗರು, ಜೀತದಾರರು ಇವರೆಲ್ಲರ ಮಕ್ಕಳು ಒಂದೇ ಕಡೆ ಕಲಿಯುತ್ತಿದ್ದರು. ಎಲ್ಲರೂ ಒಂದೇ ಕಡೆ ಓದುವಾಗ ಕೇಳುವವರು ಇರುತ್ತಿದ್ದರು. ಒಂದೇ ಕಡೆ ಕಲಿಕೆ, ಒಡನಾಟವೇ ದೊಡ್ಡ ಶಿಕ್ಷಣ. ಇಂದು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಗುಣಮಟ್ಟ ಕುಸಿದಿದೆ ಎಂದು ಹೇಳುತ್ತಿದ್ದೇವೆ. ‘ಪಂಚವರ್ಣ’ (ಬಡವರು, ಮಧ್ಯಮ ವರ್ಗ, ಶ್ರೀಮಂತರು, ಹೈಟೆಕ್ ಮಂದಿ, ವಿವಿಧ ಮಾಧ್ಯಮ) ಶಿಕ್ಷಣ ಪದ್ಧತಿ , ಶಿಕ್ಷಣ ತಾರತಮ್ಯ ಇತ್ಯಾದಿಗಳೇ ಶಿಕ್ಷಣ ಗುಣಮಟ್ಟ ಕುಸಿಯಲು ಕಾರಣವಾಗಿದೆ ಎಂದರು.
ಈ ರೀತಿಯ ವ್ಯವಸ್ಥೆ ಇದ್ದಾಗ ಜನರ ಚಿತ್ತ ಖಾಸಗಿ ಶಾಲೆಗಳತ್ತ ಹರಿಯುತ್ತದೆ. ಪಂಚವರ್ಣ ಪದ್ಧತಿಯಲ್ಲಿ ಶಿಕ್ಷಣ ಪಡೆದ ಮಕ್ಕಳು ದೊಡ್ಡವರಾದ ಮೇಲೆ ಸಮಾಜಕ್ಕೆ ಏನು ತಾನೇ ಕೊಡುಗೆ ನೀಡುತ್ತಾರೆ? ಹೀಗಾಗಿ, ಸಮಾನ ಶಿಕ್ಷಣ, ಸಮೀಪ ಶಾಲೆ ಇಂದಿನ ಜರೂರು ಅಗತ್ಯವಾಗಿದೆ ಎಂದು ಹೇಳಿದರು.
ಕನ್ನಡ ಪರ ಹೋರಾಟಗಾರ ಸ.ರ. ಸುದರ್ಶನ ಮಾತನಾಡಿ, ಕಾನೂನಿನ ಹೋರಾಟದಲ್ಲಿ ಗೆಲ್ಲುವ ಇಚ್ಛಾಶಕ್ತಿ ಪ್ರದರ್ಶಿಸುವ ಅಗತ್ಯ ಕನ್ನಡಿಗರ ಮುಂದಿದೆ. ಪ್ರೊ.ಪಂಡಿತಾರಾಧ್ಯ ಅವರು ಮಾತೃಭಾಷೆಯಲ್ಲೇ ಕನ್ನಡ ನೀಡಬೇಕು ಎಂದು ದಾವೆ ಹೂಡಿದ್ದರು. ಅರ್ಜಿ ವಿಚಾರಣೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಎಲ್ಲರೂ ಕಾನೂನು ಹೋರಾಟವನ್ನು ಬೆಂಬಲಿಸಬೇಕಿದೆ. ಉದಾರಿಗಳು ಧನಸಹಾಯ ನೀಡಬಹುದು ಎಂದರು.ಸಭಿಕರಲ್ಲಿ ಕೆಲವರು ಈ ಹೋರಾಟಕ್ಕೆ ಶಕ್ತ್ಯಾನುಸಾರ ಧನಸಹಾಯ ಘೋಷಿಸಿದರು.
ಚಿಂತಕ ಪ. ಮಲ್ಲೇಶ್ ಅಧ್ಯಕ್ಷತೆ ವಹಿಸಿದ್ದರು. ರಂಗಾಯಣ ನಿರ್ದೇಶಕ ಎಚ್. ಜನಾರ್ದನ್, ಕೃತಿಕಾರ ರಂಗನಾಥ್ ಕಂಟನಕುಂಟೆ, ಲೋಹಿಯಾ ಪ್ರಕಾಶನದ ಪ್ರಕಾಶಕ ಚನ್ನಬಸವಣ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.