ADVERTISEMENT

ಸರ್ಕಾರದಿಂದಲೇ ಸ್ಪರ್ಧಾ ಪರೀಕ್ಷೆ ತರಬೇತಿ ಸಂಸ್ಥೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಇಂಗಿತ

​ಪ್ರಜಾವಾಣಿ ವಾರ್ತೆ
Published 24 ಜೂನ್ 2013, 20:27 IST
Last Updated 24 ಜೂನ್ 2013, 20:27 IST
ಬೆಂಗಳೂರಿನಲ್ಲಿ ಸೋಮವಾರ `ಜಸ್ಟಿಸ್' ಸಂಸ್ಥೆಯಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಕೇಂದ್ರೀಯ ನಾಗರಿಕ ಸೇವೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದಿಸಿದರು. ಶಾಸಕ ಬಿ.ಎನ್. ವಿಜಯಕುಮಾರ್, ಸಚಿವ ಎಚ್.ಎಸ್. ಮಹದೇವ ಪ್ರಸಾದ್, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಚಿವ ರಾಮಲಿಂಗಾರೆಡ್ಡಿ ಉಪಸ್ಥಿತರಿದ್ದರು.
ಬೆಂಗಳೂರಿನಲ್ಲಿ ಸೋಮವಾರ `ಜಸ್ಟಿಸ್' ಸಂಸ್ಥೆಯಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಕೇಂದ್ರೀಯ ನಾಗರಿಕ ಸೇವೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದಿಸಿದರು. ಶಾಸಕ ಬಿ.ಎನ್. ವಿಜಯಕುಮಾರ್, ಸಚಿವ ಎಚ್.ಎಸ್. ಮಹದೇವ ಪ್ರಸಾದ್, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಚಿವ ರಾಮಲಿಂಗಾರೆಡ್ಡಿ ಉಪಸ್ಥಿತರಿದ್ದರು.   

ಬೆಂಗಳೂರು: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಸಂಸ್ಥೆಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಜೆಎಸ್‌ಎಸ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆಯಲ್ಲಿ (ಜಸ್ಟಿಸ್) ತರಬೇತಿ ಪಡೆದು ಕೇಂದ್ರೀಯ ನಾಗರಿಕ ಸೇವೆಗಳಿಗೆ ಆಯ್ಕೆಯಾದ 11 ಅಭ್ಯರ್ಥಿಗಳಿಗೆ ಸೋಮವಾರ ನಗರದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಜೆಎಸ್‌ಎಸ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆ (ಜಸ್ಟಿಸ್) ಮಾದರಿಯಲ್ಲಿ ಈ ಸಂಸ್ಥೆಗಳನ್ನು ಆರಂಭಿಸಿ ಗ್ರಂಥಾಲಯ ಸೇರಿದಂತೆ ಅಗತ್ಯವಾದ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು. ಐಎಎಸ್, ಕೆಎಎಸ್, ಐಆರ್‌ಎಸ್ ಮುಂತಾದ ಹುದ್ದೆಗಳು ಆಡಂಬರದ ಹುದ್ದೆಗಳಲ್ಲ ಮತ್ತು ಸೌಲಭ್ಯಗಳಿಂದ ಕೂಡಿರುವ ಭಂಡಾರವೂ ಅಲ್ಲ. ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ನೊಂದವರ, ಬಡವರ ಕಣ್ಣೊರೆಸಿದರೆ ಮಾತ್ರ ನಿಜವಾದ ಉದ್ದೇಶ ಈಡೇರಿದಂತಾಗುತ್ತದೆ ಎಂದರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಮದ್ಯವಸನಿಗಳಿಂದ ಸಮಾಜದಲ್ಲಿ ಹಲವು ರೀತಿಯಲ್ಲಿ ಅವಘಡಗಳು ಸಂಭವಿಸುತ್ತಿವೆ. ಮದ್ಯಪಾನವನ್ನು ಸಂಪೂರ್ಣ ನಿಷೇಧಿಸಬೇಕು ಮತ್ತು ಕಳ್ಳಬಟ್ಟಿಯನ್ನು ಸಂಪೂರ್ಣ ನಿಯಂತ್ರಿಸಬೇಕು ಎಂದು ಸಲಹೆ ನೀಡಿದರು.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಸಹಕಾರ ಸಚಿವ ಎಚ್.ಎಸ್. ಮಹದೇವ ಪ್ರಸಾದ್, ಶಾಸಕ ಬಿ.ಎನ್. ವಿಜಯಕುಮಾರ್, `ಜಸ್ಟಿಸ್' ಸಂಸ್ಥೆಯ ಗೌರವ ಅಧ್ಯಕ್ಷ ಎಸ್.ಬಿ. ಮುದ್ದಪ್ಪ ಉಪಸ್ಥಿತರಿದ್ದರು.

2012ನೇ ಸಾಲಿನಲ್ಲಿ ಕೇಂದ್ರೀಯ ನಾಗರಿಕ ಸೇವೆಗಳಿಗೆ ಆಯ್ಕೆಯಾದ ಸ್ನೇಹಲ್ ಅಣ್ಣಾಸಾಹೇಬ್ ರಾಯಮಾನೆ, ಪ್ರೀತ್ ಗಣಪತಿ, ಅಮಿತ್‌ಕುಮಾರ್, ಜಿ.ಆರ್. ಸಂದೀಪ್, ಸಿ.ಟಿ. ಶಿಲ್ಪಾನಾಗ್, ಬಿ.ಆರ್. ವರುಣ್, ರಕ್ಷಿತಾ ಕೆ. ಮೂರ್ತಿ, ಡಾ.ಕೆ. ಪಿ.ಪ್ರದೀಪ್, ಜೆ. ಲೋಹಿತೇಶ್ವರ್, ಡಾ. ಮಂಜುನಾಥ್ ಅಪ್ಪಾಸಾಹೇಬ್ ಕನಮಡಿ, ಕಲ್ಮೇಶ್ವರ್ ಶಿವಾಜಿ ಶಿಂಗೇನವರ್ ಅವರನ್ನು ಮುಖ್ಯಮಂತ್ರಿ ಅಭಿನಂದಿಸಿದರು.

`ಸಮಾಜ ಸೇವೆ ಧ್ಯೇಯವಾಗಲಿ'
`ಯುಪಿಎಸ್‌ಸಿ, ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ಸು ಗಳಿಸುವುದೇ ಜೀವನದ ದೊಡ್ಡ ಗುರಿಯಾಗಬಾರದು. ಪರೀಕ್ಷೆಯಲ್ಲಿ ಯಶಸ್ಸು ಸಾಧಿಸುವುದು ಒಂದು ಹಂತ ಮಾತ್ರ. ನಂತರದಲ್ಲಿ ಸಮಾಜಕ್ಕೆ ಸೇವೆ ಸಲ್ಲಿಸುವುದೇ ನಮ್ಮ ಧ್ಯೇಯವಾಗಬೇಕು' ಎಂದು ಯುಪಿಎಸ್‌ಸಿ ಪರೀಕ್ಷೆಯಲ್ಲಿ 77ನೇ  ರ‍್ಯಾಂಕ್ ಪಡೆದಿರುವ ಸ್ನೇಹಲ್ ಅಣ್ಣಾಸಾಹೇಬ ರಾಯಮಾನೆ ಅಭಿಪ್ರಾಯಪಟ್ಟರು.

`ನಾನು 7 ಬಾರಿ ಪರೀಕ್ಷೆ ಬರೆದಿದ್ದು, 5 ಬಾರಿ ವಿಫಲನಾಗಿದ್ದೆ. ಪರಿಶ್ರಮ ಮತ್ತು ಸಾಧಿಸುವ ಛಲದಿಂದ ಮಾತ್ರ ಯಶಸ್ಸು ಸಾಧ್ಯ. ಕಾಲೇಜು ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತ ನಾನು ಐಎಎಸ್‌ಗೆ ಸಿದ್ಧತೆ ನಡೆಸಿದೆ. ದಿನಕ್ಕೆ 3-4 ಗಂಟೆಗಳ ಕಾಲ ಅಧ್ಯಯನ ಮಾಡುತ್ತಿದ್ದೆ. ಪರೀಕ್ಷೆಯಲ್ಲಿ ಯಶಸ್ಸು ಸಾಧಿಸದಿದ್ದರೆ ಹತಾಶೆಗೊಳಗಾಬಾರದು' ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.