ADVERTISEMENT

ಸರ್ಕಾರದ ಅಸ್ಥಿರತೆಗೆ ಬಿಜೆಪಿ ತಂತ್ರ

​ಪ್ರಜಾವಾಣಿ ವಾರ್ತೆ
Published 5 ಜೂನ್ 2011, 19:30 IST
Last Updated 5 ಜೂನ್ 2011, 19:30 IST

ಬೆಂಗಳೂರು: ಬಾಬಾ ರಾಮದೇವ್ ಆರಂಭಿಸಿರುವ ಹೋರಾಟದಲ್ಲಿ ಬಿಜೆಪಿ ಮತ್ತು ಸಂಘ ಪರಿವಾರದ ಮುಖಂಡರು ಭಾಗವಹಿಸಿರುವುದನ್ನು ನೋಡಿದರೆ ಜನರಿಂದ ಆಯ್ಕೆಯಾಗಿರುವ ಕೇಂದ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಕುತಂತ್ರ ನಡೆದಿದೆ ಎನ್ನುವುದು ಭಾಸವಾಗುತ್ತದೆ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಭಾನುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮದೇವ್ ಎತ್ತಿರುವ ವಿಚಾರಗಳಿಗೆ ಪಕ್ಷದ ಸಹಮತ ಇದೆ. ಆದರೆ ಅವರ ಹೋರಾಟ ರಾಜಕೀಯ ತಿರುವು ಪಡೆದುಕೊಂಡಿರುವುದು ನೋಡಿದರೆ ಇದರ ಹಿಂದೆ ಸಂಘ ಪರಿವಾರದವರ ಕೈವಾಡ ಇರುವುದು ಸ್ಪಷ್ಟವಾಗುತ್ತದೆ ಎಂದ ಅವರು, ಇದರ ಲಾಭ ಪಡೆದುಕೊಂಡು ಬಿಜೆಪಿ ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಹಾತೊರೆಯುತ್ತಿದೆ ಎಂದು ಟೀಕಿಸಿದರು.

ಹಿಂದೆ ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಇದ್ದಾಗ ಬಿಜೆಪಿಯ ಹಿರಿಯ ನಾಯಕರಾದ ಎಲ್.ಕೆ. ಅಡ್ವಾಣಿ ಉಪ ಪ್ರಧಾನಿಯಾಗಿದ್ದರು. ಆಗ ಅವರು ಕಪ್ಪು ಹಣ ವಾಪಸ್ ತರಲು ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಬಹುದಿತ್ತು. ಆಗ ಅವರ ಕೈಯನ್ನು ಯಾರು ಕಟ್ಟಿಹಾಕಿದ್ದರು ಎಂದು ಪ್ರಶ್ನಿಸಿದ ಕುಮಾರಸ್ವಾಮಿ, `ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಹಕ್ಕು ಬಿಜೆಪಿಗೆ ಇಲ್ಲ~ ಎಂದರು.

 ರಾಮದೇವ್ ಅವರ ಸತ್ಯಾಗ್ರಹದ ಬಗ್ಗೆ ಕೇಂದ್ರ ಸರ್ಕಾರ ಶನಿವಾರದಿಂದ ಗೊಂದಲಮಯ ವರ್ತನೆ ತೋರಿಸುತ್ತಿದೆ. ಪೊಲೀಸ್ ಕಾರ್ಯಾಚರಣೆಯ ಕುರಿತು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಅವರು ಒತ್ತಾ ಯಿಸಿದರು. `ರಾಜ್ಯದ ಬಿಜೆಪಿ ನಾಯಕರು ಮತ್ತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬಾಬಾ ರಾಮದೇವ್ ಹೋರಾಟವನ್ನು ಸಮರ್ಥಿಸಿ ನೀಡಿರುವ ಹೇಳಿಕೆಗಳನ್ನು ಗಮನಿಸಿದ್ದೇನೆ. ಅವರ ಹೋರಾಟದ ಕುರಿತು ಮುಖ್ಯಮಂತ್ರಿಗಳ ಹೇಳಿಕೆಯಂತೂ ಈ ಶತಮಾನದ ಅಚ್ಚರಿ~ ಎಂದು ಲೇವಡಿ ಮಾಡಿದರು.

ಗೊಂದಲಮಯ
`ನವದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಘಟನೆಯನ್ನು ಗಮನಿಸಿದ್ದೇನೆ. ಈಗ ಎಲ್ಲವೂ ಗೊಂದಲಮಯವಾಗಿ ಕಾಣಿಸುತ್ತಿದೆ. ಇನ್ನು ಮೂರು-ನಾಲ್ಕು ದಿನಗಳಲ್ಲಿ ಸ್ಪಷ್ಟ ಚಿತ್ರಣ ದೊರೆಯಲಿದೆ~ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್. ಡಿ.ದೇವೇಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.