ADVERTISEMENT

ಸರ್ಕಾರದ ಹಣದಲ್ಲಿ ಸಾಧನೆ ಸಂಭ್ರಮ ಯಾತ್ರೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2017, 19:30 IST
Last Updated 3 ಡಿಸೆಂಬರ್ 2017, 19:30 IST
ಸರ್ಕಾರದ ಹಣದಲ್ಲಿ ಸಾಧನೆ ಸಂಭ್ರಮ ಯಾತ್ರೆ
ಸರ್ಕಾರದ ಹಣದಲ್ಲಿ ಸಾಧನೆ ಸಂಭ್ರಮ ಯಾತ್ರೆ   

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಹಣ ಬಳಸಿ ‘ಸಾಧನೆ ಸಂಭ್ರಮ’ ಯಾತ್ರೆ ನಡೆಸಲು ಮುಂದಾಗಿರುವುದು ಸರಿಯಲ್ಲ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

‘ಯಾರದೊ ದುಡ್ಡು ಎಲ್ಲಮ್ಮನ ಜಾತ್ರೆ ಎಂಬ ರೀತಿಯಲ್ಲಿ ಸಿದ್ದರಾಮಯ್ಯ ಅವರ ಯಾತ್ರೆ ನಡೆಯುತ್ತಿದೆ’ ಎಂದು ಅವರು ಭಾನುವಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

‘ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸುವ ಕಾರ್ಯ ಆರಂಭಿಸಿದ್ದೇವೆ. ಪಕ್ಷ ಸಂಘಟನೆ ಮತ್ತು ಜನರ ಜತೆ ವಿಶ್ವಾಸದಿಂದ ಒಡನಾಟ ಹೊಂದಿದವರಿಗಷ್ಟೇ ಆದ್ಯತೆ ನೀಡಲಾಗುತ್ತದೆ.  ಕಾಂಗ್ರೆಸ್‌ ಮತ್ತು ಬಿಜೆಪಿಗಿಂತ ಮೊದಲೇ ನಾವು ಪಟ್ಟಿ ಬಿಡುಗಡೆ ಮಾಡುತ್ತೇವೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡೆ ಪಟ್ಟಿ ಬಿಡುಗಡೆ ಮಾಡುತ್ತೇನೆ’ ಎಂದು ಅವರು ಹೇಳಿದರು.

ADVERTISEMENT

‘ಟಿಕೆಟ್‌ಗೆ ಸಂಬಂಧಿಸಿದಂತೆ ಸಮಸ್ಯೆ ಆಗದಿರಲಿ ಎಂದು ಎಲ್ಲ ವಿಧಾನಸಭಾ ಕ್ಷೇತ್ರಗಳ ಆಕಾಂಕ್ಷಿಗಳನ್ನು ಕರೆಸಿ ಮಾತುಕತೆ ನಡೆಸಲಾಗುತ್ತಿದೆ. ಸಮಸ್ಯೆ ಇರುವ ಕಡೆಗಳಲ್ಲಿ ಸೌಹಾರ್ದವಾಗಿ ವಿಷಯವನ್ನು ಬಗೆಹರಿಸಲಾಗುವುದು. ಕಿತ್ತಾಟಕ್ಕೆ ಅವಕಾಶ ನೀಡುವುದಿಲ್ಲ. ಹಲವು ಕ್ಷೇತ್ರಗಳಲ್ಲಿ ಟಿಕೆಟ್‌ಗಾಗಿ ಭಾರಿ ಪೈಪೋಟಿ ಇದೆ ’ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

‘ಚುನಾವಣೆ ಸಂದರ್ಭದಲ್ಲಿ ಭ್ರಷ್ಟಾಚಾರ ಮತ್ತು ಹಗರಣಗಳ ಬಗ್ಗೆ ಚರ್ಚೆ ಮಾಡುವುದಿಲ್ಲ. ನಮ್ಮ ಪಕ್ಷದ ಕಾರ್ಯಕ್ರಮಗಳು ಮತ್ತು ಹಿಂದಿನ ಸಾಧನೆಗಳನ್ನಷ್ಟೇ ಬಿಂಬಿಸುತ್ತೇವೆ. ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಸಣ್ಣ– ಪುಟ್ಟ ಪಕ್ಷಗಳ ಜೊತೆ ಹೊಂದಾಣಿಕೆಗೆ ಸಿದ್ಧರಿದ್ದೇವೆ’ ಎಂದೂ ಅವರು ಹೇಳಿದರು.

ಅಲ್ಪಸಂಖ್ಯಾತರಿಗೆ ರಾಜ್ಯ ಅಧ್ಯಕ್ಷ ಸ್ಥಾನ ಕೊಡಿ ಎಂದು ಶಾಸಕ ಜಮೀರ್‌ ಅಹಮದ್‌ ಖಾನ್‌ ಹೇಳಿಕೆ ನೀಡಿರುವ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ‘ನನ್ನ ಪಕ್ಷದ ವಿಚಾರದಲ್ಲಿ ತಲೆ ಹಾಕಲು ಅವರು ಯಾರು, ಅವರ ಬಗ್ಗೆ ಪ್ರಶ್ನೆಗಳನ್ನು ಕೇಳಬೇಡಿ. ಅವರು ಕೇಳುವ ರೀತಿ ನೋಡಿದರೆ ಈ ಪಕ್ಷವನ್ನು ದೊಡ್ಡ ಮಟ್ಟದಲ್ಲಿ ಬೆಳೆಸಿರುವವರಂತೆ ವರ್ತಿಸುತ್ತಿದ್ದಾರೆ. ಇನ್ನೊಮ್ಮೆ ಅವರು ಹೇಳಿದ್ದನ್ನು ಇಲ್ಲಿ ಕೇಳಬೇಡಿ’ ಎಂದರು.

ಇದೇ 10 ರಂದು ತುಮಕೂರಿನಲ್ಲಿ ಅಲ್ಪಸಂಖ್ಯಾತರ ಸಮಾವೇಶ ಮತ್ತು 13 ರಂದು ದಲಿತ ಸಮುದಾಯದ ಸಮಾವೇಶ ಏರ್ಪಡಿಸಲಾಗಿದೆ. ಆ ಬಳಿಕ ಎರಡನೇ ಹಂತದ ಗ್ರಾಮ ವಾಸ್ತವ್ಯ ಆರಂಭಿಸಲಾಗುವುದು ಎಂದು ಕುಮಾರಸ್ವಾಮಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.