ಬೆಂಗಳೂರು: ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಸೂಕ್ತ ಸಲಹೆ ನೀಡುವ ಉದ್ದೇಶದಿಂದ ನೇಮಿಸಿದ್ದ, ಅಭಿವೃದ್ಧಿ ಆಯುಕ್ತ ಸುಬೀರ್ ಹರಿಸಿಂಗ್ ಅಧ್ಯಕ್ಷತೆಯ ಅಧಿಕಾರಿಗಳ ವೇತನ ಸಮಿತಿ ಸೋಮವಾರ ರಾತ್ರಿ ತನ್ನ ವರದಿಯನ್ನು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರಿಗೆ ಸಲ್ಲಿಸಿದೆ.
ವರದಿಯಲ್ಲಿನ ಶಿಫಾರಸುಗಳ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದ ಸುಬೀರ್ ಅವರು `ವರದಿ ನೀಡುವುದಷ್ಟೇ ನಮ್ಮ ಕೆಲಸ. ವಿವರ ಬೇಕಿದ್ದರೆ ಮುಖ್ಯಮಂತ್ರಿಯವರನ್ನೇ ಸಂಪರ್ಕಿಸಬೇಕು~ ಎಂದು ಹೇಳಿದ್ದಾರೆ.
`ವೇತನ ಸಮಿತಿಯ ಶಿಫಾರಸುಗಳ ಬಗ್ಗೆ ಊಹಾಪೋಹಗಳು ಹಬ್ಬಿದ್ದು, ನಿಖರವಾಗಿ ಎಷ್ಟು ಪ್ರಮಾಣದ ವೇತನ ಹೆಚ್ಚಳವಾಗುತ್ತದೆ ಎಂಬುದು ಗೊತ್ತಾಗುತ್ತಿಲ್ಲ~ ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಲ್.ಬೈರಪ್ಪ `ಪ್ರಜಾವಾಣಿ~ಗೆ ಪ್ರತಿಕ್ರಿಯೆ ನೀಡಿದರು.
ಅಧಿಕಾರಿಗಳ ವೇತನ ಸಮಿತಿ ಗೋಪ್ಯವಾಗಿಯೇ ವರದಿಯನ್ನು ಮುಖ್ಯಮಂತ್ರಿಗೆ ತಲುಪಿಸಿದ್ದು, ಮುಂದಿನ ಸಾಲಿನ ಬಜೆಟ್‌ನಲ್ಲಿ ಆ ಕುರಿತು ಪ್ರಕಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪ ಚುನಾವಣೆ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಅದನ್ನು ಬಹಿರಂಗಪಡಿಸುವುದು ಸರಿಯಲ್ಲ ಎಂಬ ಕಾರಣಕ್ಕೂ ಅದನ್ನು ಗೋಪ್ಯವಾಗಿ ಇಡಲಾಗಿದೆ ಎಂದು ಗೊತ್ತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.