ADVERTISEMENT

ಸರ್ಕಾರಿ ಸಂಸ್ಥೆಗಳಿಗೆ ಕಾರ್ಮಿಕರ ನೋಂದಣಿ ಹೊಣೆ!

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2013, 19:59 IST
Last Updated 25 ಸೆಪ್ಟೆಂಬರ್ 2013, 19:59 IST

ದಾವಣಗೆರೆ: ಸರ್ಕಾರಿ ಸಂಸ್ಥೆಗಳು ಇನ್ನು ಮುಂದೆ ಯಾವುದೇ ಕೆಲಸಗಳಿಗೆ ನೋಂದಣಿಯಾಗಿಲ್ಲದ ಕಾರ್ಮಿಕರನ್ನು ಬಳಸಿಕೊಳ್ಳುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಅಂತೆಯೇ ಕಾರ್ಮಿಕರ ನೋಂದಣಿ ಜವಾಬ್ದಾರಿಯನ್ನೂ ನಿರ್ವಹಿಸಬೇಕಾಗುತ್ತದೆ.

ಕಟ್ಟಡ ಮತ್ತು ಇತರ ನಿರ್ಮಾಣ ಕಾಮಗಾರಿ ಗಳಲ್ಲಿ ದುಡಿಸಿಕೊಳ್ಳುವಾಗ ಕಾರ್ಮಿಕರು ನೋಂ ದಾಯಿತ ರಾಗಿದ್ದಾರೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಬೇಕು. ಇಲ್ಲವಾದಲ್ಲಿ, ನೋಂದಣಿ ಮಾಡಿಸಲು ಕ್ರಮ ವಹಿಸ ಬೇಕು; ನಂತರವಷ್ಟೇ ಕೆಲಸ ಕೊಡಬೇಕು ಎಂದು ಸರ್ಕಾರ ಈಚೆಗೆ ಆದೇಶ ಹೊರಡಿಸಿದೆ. ಇದರೊಂದಿಗೆ ಕಾರ್ಮಿಕರ ನೋಂದಣಿ ಜವಾಬ್ದಾರಿಯನ್ನು ಕಾರ್ಮಿಕ ಇಲಾಖೆ ಮಾತ್ರ ವಲ್ಲದೇ, ಇತರ ಇಲಾಖೆಗಳು ಹಾಗೂ ಗುತ್ತಿಗೆ ದಾರ ರಿಗೂ ವಿಸ್ತರಿಸಿದಂತಾಗಿದೆ. ಈ ಮೂಲಕ ನೋಂದಣಿ ಪ್ರಮಾಣ ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ.

ನೋಂದಣಿ ಹೆಚ್ಚಿಸಲು: ನಗರಸಭೆ, ನಗರಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳು, ಲೋಕೋಪಯೋಗಿ ಇಲಾಖೆ, ನಿರ್ಮಿತಿ ಕೇಂದ್ರ, ಜಿಲ್ಲಾ ಪಂಚಾಯ್ತಿ ಎಂಜಿನಿಯರಿಂಗ್‌ ವಿಭಾಗ, ಜಲಾನಯನ ಇಲಾಖೆ, ಬೃಹತ್‌ ನೀರಾವರಿ ಇಲಾಖೆ, ಭೂಸೇನಾ ನಿಗಮ ಮೊದಲಾದ ಸರ್ಕಾರದ ಹಲವು ಸಂಸ್ಥೆಗಳು ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರನ್ನು ಕೆಲಸಗಳಿಗೆ ಬಳಸಿಕೊಳ್ಳುತ್ತಿವೆ. ಆದರೆ, ಆ ಕಾರ್ಮಿಕರು ನೋಂದ ಣಿಯಾದವರೇ ಇಲ್ಲವೇ ಎಂಬುದನ್ನು ಪರಿಶೀಲಿ ಸುತ್ತಿಲ್ಲ. ಇದರಿಂದಾಗಿ ಲಕ್ಷಾಂತರ ಕಾರ್ಮಿಕರು ಸರ್ಕಾರದ ಸೌಲಭ್ಯದ ವ್ಯಾಪ್ತಿಗೆ ಬಂದಿಲ್ಲ. ಇಲಾ ಖೆಯ ಮಾಹಿತಿ ಪ್ರಕಾರ, ರಾಜ್ಯದಲ್ಲಿ 2,70,352 ಕಟ್ಟಡ ಕಾರ್ಮಿಕರಿದ್ದರೆ ಇದರಲ್ಲಿ ನೋಂದಣಿ ಆಗಿರುವವರು ಶೇ 20ರಷ್ಟು ಮಂದಿ ಮಾತ್ರ! ಅರಿವಿನ ಕೊರತೆ ಹಾಗೂ ಇಲಾಖೆಯ ಧೋರಣೆಯಿಂದಾಗಿ ಕಾರ್ಮಿಕರು ಸೌಲಭ್ಯಗಳಿಂದ ದೂರವಿದ್ದಾರೆ. ಇದನ್ನು ತಪ್ಪಿಸಲು ನೋಂದಣಿ ಹೊಣೆಯನ್ನು ಸರ್ಕಾರದ ಇತರ ಸಂಸ್ಥೆಗಳಿಗೂ ನೀಡಲಾಗಿದೆ.

ಏನು ಅನುಕೂಲ?: ‘ಕಟ್ಟಡ ಹಾಗೂ ಇತರ ನಿರ್ಮಾಣ ಕಾಮಗಾರಿಗಳಲ್ಲಿ ನೋಂದಾಯಿತ ಕಾರ್ಮಿಕರನ್ನು ಬಳಸಿಕೊಳ್ಳುವುದು ಆಯಾ ಸರ್ಕಾರಿ ಸಂಸ್ಥೆಗಳ ಹಾಗೂ ಕಾರ್ಮಿಕರ ಹಿತದೃಷ್ಟಿಯಿಂದಲೂ ಒಳ್ಳೆಯದು. ಎಷ್ಟೋ ಕಾರ್ಮಿಕರು ನೋಂದಣಿಯೇ ಆಗದೇ ಸೌಲಭ್ಯ ಪಡೆಯುವುದಕ್ಕೆ ಆಗಿಲ್ಲ. ಹೀಗಾಗಿ, ಸರ್ಕಾರಿ ಸಂಸ್ಥೆಗಳು ಅಥವಾ ಗುತ್ತಿಗೆದಾರರು ಕಾರ್ಮಿಕರ ನೋಂದಣಿ ಮಾಡಿಸುವುದನ್ನು ಕಡ್ಡಾಯ ಗೊಳಿಸಲಾಗಿದೆ. ಇದರಿಂದ ನೋಂದಾಯಿತ ಕಾರ್ಮಿಕರ ಸಂಖ್ಯೆ ದುಪ್ಪಟ್ಟಾಗಲಿದೆ. ಗುತ್ತಿಗೆದಾರರು ಒಂದೇ ಬಾರಿಗೆ ನೂರಾರು ಅರ್ಜಿ ತರುವುದರಿಂದ ನೋಂದಣಿಯೂ ಸುಲಭವಾಗಲಿದೆ. ಕಾರ್ಮಿಕರಿಗೆ ಅನುಕೂಲವೂ ಆಗುತ್ತದೆ’ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಹಿರೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ನೋಂದಾಯಿತ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳೇನು?

*ಮನೆ ನಿರ್ಮಾಣಕ್ಕೆ ₨ 2 ಲಕ್ಷದವರೆಗೆ ಸಾಲ (ಇದರಲ್ಲಿ ₨  50 ಸಾವಿರ ಸಬ್ಸಿಡಿ)
*ಇಬ್ಬರು ಮಕ್ಕಳಿಗೆ 5ನೇ ತರಗತಿಯಿಂದ ಎಂಜಿನಿಯರಿಂಗ್‌, ವೈದ್ಯಕೀಯ ಕೋರ್ಸ್‌ ವ್ಯಾಸಂಗದವರೆಗೂ ವಿದ್ಯಾರ್ಥಿ ವೇತನ
*ಮಹಿಳಾ ಫಲಾನುಭವಿಗೆ ಮೊದಲ ಎರಡು ಹೆರಿಗೆಗೆ ಸಹಾಯಧನ
*ಮಾನ್ಯತೆ ಪಡೆದ ಆಸ್ಪತ್ರೆಗಳಲ್ಲಿ ವೈದ್ಯಕೀಯ ಚಿಕಿತ್ಸಾ ಸೇವೆ
*ಕೆಲಸದ ಸ್ಥಳಗಳಲ್ಲಿ ಅವಘಡದಿಂದ ಮೃತಪಟ್ಟರೆ ₨ 2 ಲಕ್ಷ ಪರಿಹಾರ. ಅಂಗವೈಕಲ್ಯದ ಪ್ರಮಾಣ ಆಧರಿಸಿ ಪರಿಹಾರ (₨ 20 ಸಾವಿರದಿಂದ ಆರಂಭಿಸಿ)
*ಫಲಾನುಭವಿ ಅಥವಾ ಅವರ ಇಬ್ಬರು ಮಕ್ಕಳ ಮದುವೆಗೆ ತಲಾ ₨ 50 ಸಾವಿರ ಸಹಾಯಧನ
*ಉಪಕರಣಗಳ ಖರೀದಿಗೆ ₨ 5 ಸಾವಿರ ಬಡ್ಡಿರಹಿತ ಸಾಲ
*ನಿರಂತರವಾಗಿ ಐದು ವರ್ಷ ನೋಂದಾಯಿತರಾಗಿರುವ 55 ವರ್ಷ ತುಂಬಿದ ಪುರುಷ ಹಾಗೂ 60 ವರ್ಷ ತುಂಬಿದ ಮಹಿಳಾ ಫಲಾನುಭವಿಗೆ ಮಾಸಿಕ ₨ 500 ಪಿಂಚಣಿ (3 ವರ್ಷಕ್ಕೊಮ್ಮೆ ನೋಂದಣಿ ನವೀಕರಿಸಬೇಕು)
* ಸಹಜ ಸಾವಿಗೀಡಾದರೆ ಅಂತ್ಯಕ್ರಿಯೆಗೆ ₨ 4 ಸಾವಿರ. ₨ 50 ಸಾವಿರ ಪರಿಹಾರ (ಎಕ್ಸ್‌ಗ್ರೇಷಿಯಾ)
*ಹೃದಯ ಶಸ್ತ್ರಚಿಕಿತ್ಸೆ, ಮೂತ್ರಪಿಂಡ ಜೋಡಣೆ ಸೇರಿದಂತೆ ಪ್ರಮುಖ ಕಾಯಿಲೆಗಳ ಚಿಕಿತ್ಸೆಗೆ ₨ 2 ಲಕ್ಷದವರೆಗೆ ವೈದ್ಯಕೀಯ ಸೌಲಭ್ಯ

ಇನ್‌ಸ್ಟೆಕ್ಟರ್‌ಗಳ ಕೊರತೆ
ಕಾರ್ಮಿಕರ ನೋಂದಣಿ ಸಂಬಂಧ ತಾಲ್ಲೂಕಿಗೆ ಒಬ್ಬ ಇನ್‌ಸ್ಪೆಕ್ಟರ್‌ ಮಾತ್ರ ಇದ್ದಾರೆ. ಇದರಿಂದ, ನೋಂದಣಿ ಪ್ರಕ್ರಿಯೆ ತ್ವರಿತವಾಗಿ ನಡೆಸಲು ಹಾಗೂ ದೂರದಲ್ಲೆಲ್ಲೋ ನಡೆ ಯುವ ಕಾಮಗಾರಿ ಸ್ಥಳದಲ್ಲಿ ನೋಂದಾಯಿತ ಕಾರ್ಮಿಕರಿದ್ದಾರೆಯೋ ಇಲ್ಲವೋ ಎಂಬುದನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ. ಕಾರ್ಮಿಕರ ನೋಂದಣಿ ಕಡಿಮೆ ಇರುವುದಕ್ಕೆ ಹಾಗೂ ಕುಂಟುತ್ತಾ ಸಾಗುತ್ತಿರುವುದಕ್ಕೆ ಸಿಬ್ಬಂದಿ ಕೊರತೆಯೂ ಕಾರಣವಾಗಿದೆ ಎನ್ನುತ್ತವೆ ಇಲಾಖೆಯ ಮೂಲಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.